ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದ ಆರೋಪ ಸಾಬೀತಾಗಿದ್ದು, ಮಂಗಳೂರಿನ FTSC-I ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.
ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. 2025ರ ಜೂನ್ 23ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿತ್ತು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 79/2025, ಕಲಂ: 11, 12 ಪೋಕ್ಸೋ ಆಕ್ಟ್ - 2012 ಮತ್ತು ಕಲಂ: 75(i)(ii), 79 BNS-2023 ರಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ತನಿಖಾಧಿಕಾರಿಗಳಾದ ಪಿ.ಎಸ್.ಐ ಕೀರಪ್ಪ ಘಟಕಾಂಬಳೆ ಹಾಗೂ ಪಿ.ಎಸ್.ಐ ಕೃಷ್ಣಕಾಂತ ಪಾಟೀಲ್ ಅವರು ನಡೆಸಿ, ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಮಂಗಳೂರಿನ ಮಾನ್ಯ FTSC-I ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿ, ನ್ಯಾಯಾಧೀಶರಾದ ಮೋಹನ್ ಜೆ.ಎಸ್. ಅವರು 2026ರ ಜುಲೈ 31ರಂದು ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ (Concurrently) ಜಾರಿಯಾಗಲಿದ್ದು, ಅಂತಿಮವಾಗಿ ಆರೋಪಿಗೆ 2 ವರ್ಷ 6 ತಿಂಗಳು ಶಿಕ್ಷೆ ಮತ್ತು ಒಟ್ಟು 40,000 ರೂ. ದಂಡ ವಿಧಿಸಿ ಆದೇಶಿಸಲಾಗಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.