image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನ

11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧನ

ಮಂಗಳೂರು: 2015ನೇ ಇಸವಿಯಲ್ಲಿ ಮಂಗಳೂರು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿ, ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ತಾಲೂಕು, ಕರ್ನೇಳ್ಳಿ ವಿಲೇಜ್, ಮಲ್ಲೇನಹಳ್ಳಿ ಪೋಸ್ಟ್, ಬಸ್ ನಿಲ್ದಾಣದ ಬಳಿ ಮುಖ್ಯರಸ್ತೆ ನಿವಾಸಿ ಚುಂಕಿ ಆಕಾಶಭವನ ಯಾನೆ ಸಂತೋಷ್ ಎಸ್. (34) ಎಂದು ಗುರುತಿಸಲಾಗಿದೆ.

2015ರಲ್ಲಿ ಮಂಗಳೂರು ನಗರದ ಆಕಾಶಭವನದಲ್ಲಿ ನಡೆದ ಮದುವೆಯ ಮದುರಂಗಿ ಶಾಸ್ತ್ರದ ಸಂದರ್ಭದಲ್ಲಿ, ಅಶೋಕ ಕುಮಾರ್ ಕೊಟ್ಟಾರಿ ಹಾಗೂ ಆರೋಪಿ ಜಗ್ಗು ಎಂಬವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವಿಚಾರದಲ್ಲಿ ಪ್ರಮುಖ ಆರೋಪಿ ಚುಂಕಿ ಆಕಾಶಭವನ ಹಾಗೂ ಇತರೆ ಆರೋಪಿಗಳಾದ ರಂಜಿತ್, ಧನು, ಧೂಮ, ಸ್ವೀಟಿ ಯಾನೆ ನರೇಶ್ ಮತ್ತು ಜಗ್ಗು ಎಂಬುವರು ಸೇರಿಕೊಂಡು ಅಶೋಕ ಕುಮಾರ್ ಕೊಟ್ಟಾರಿ ಅವರಿಗೆ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿ ಕೊಲೆಯತ್ನ ನಡೆಸಿದ್ದರು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ (ಕ್ರಮಾಂಕ: 135/2015) ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ದಿನದಿಂದಲೂ ತಲೆಮರೆಸಿಕೊಂಡಿದ್ದ ಆರೋಪಿ ಚುಂಕಿ ಆಕಾಶಭವನ ಸಿಗದೆ ಇರುವ ಕಾರಣ, ಮಾನ್ಯ ನ್ಯಾಯಾಲಯವು ಆತನ ವಿರುದ್ಧ ಎಲ್‌ಪಿಸಿ (LPC) ವಾರಂಟ್ (ಕ್ರಮಾಂಕ: 25/2025) ಹೊರಡಿಸಿತ್ತು. ಈತನ ಬಗ್ಗೆ ಯಾವುದೇ ಸುಳಿವು ಇಲ್ಲದಿದ್ದರೂ ಬಹಳ ಸಮಯದಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಸಿಸಿಬಿ ಪೊಲೀಸರಿಗೆ, ಈತನು ಶಿವಮೊಗ್ಗದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ದಿನಾಂಕ 29-07-2026 ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ಈತನನ್ನು ವಶಕ್ಕೆ ಪಡೆದುಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Category
ಕರಾವಳಿ ತರಂಗಿಣಿ