ಬೆಳ್ತಂಗಡಿ: ಮ್ಯಾಟ್ರಿಮೋನಿ ಆ್ಯಪ್ ಮೂಲಕ ಪರಿಚಯವಾದ ಮಹಿಳೆಯೊಬ್ಬಳು ಉದ್ಯಮಿಗೆ ವಿವಿಧ ಕಾರಣಗಳನ್ನು ನೀಡಿ ನಂಬಿಸಿ ಹಂತಹಂತವಾಗಿ ಒಟ್ಟು 87,22,710/- ರೂ. ಹಣ ಪಡೆದು ವಂಚನೆ ಎಸಗಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ನಿವಾಸಿಯಾಗಿರುವ ಹಾಗೂ ಬಿಸಿನೆಸ್ ಮಾಡುತ್ತಿರುವ ಪಿರ್ಯಾದಿದಾರರಿಗೆ 2024ನೇ ಮೇ ತಿಂಗಳಿನಲ್ಲಿ ಮ್ಯಾಟ್ರಿಮೋನಿ ಆಪ್ ಮೂಲಕ ಅನಿಷಾ ಪಾಲನ್ನ (35) ಎಂಬಾಕೆಯು ಪರಿಚಯವಾಗಿದ್ದು, ನಂತರ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಬಳಿಕ ದಿನಾಂಕ 26-09-2024 ರಿಂದ 20-01-2025 ರ ಅವಧಿಯಲ್ಲಿ ಆರೋಪಿತೆಯು ಪಿರ್ಯಾದಿದಾರರಿಗೆ ಕರೆ ಮಾಡಿ ವಿವಿಧ ಕಾರಣಗಳನ್ನು ನೀಡಿ ನಂಬಿಸಿರುತ್ತಾರೆ. ನಂತರ ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 87,22,710/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ.
ಹಣ ಪಡೆದ ನಂತರ ಆರೋಪಿತೆಯು ಮೊಬೈಲ್ ಸಂಪರ್ಕಕ್ಕೆ ಸಿಗದೇ, ಹಣವನ್ನು ವಾಪಸ್ ನೀಡದೇ ಸಂಪೂರ್ಣವಾಗಿ ವಂಚನೆ ಎಸಗಿರುತ್ತಾರೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ.ನಂ: 78/2026, ಕಲಂ: 318(4) BNS-2023 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.