ಮುಂಬೈ : ಬಾಲಿವುಡ್ ನಟ ಆಮೀರ್ ಖಾನ್ ತಮ್ಮ ಮೂರನೇ ಮದುವೆಯಿಂದಾಗಿ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಸ್ಲಿಂ ಧರ್ಮಗುರುಗಳಿಂದ ಫತ್ವಾ ಎದುರಿಸಿದ ಬೆನ್ನಲ್ಲೇ, ಇದೀಗ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ 'ಲವ್ ಜಿಹಾದ್' ಆರೋಪದ ಮೇಲೆ ನಟನಿಗೆ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದೆ. ಮೊದಲ ಎರಡು ಮದುವೆಗಳು ಹಿಂದೂ ಮಹಿಳೆಯರ ಜೊತೆ ಆಗಿದ್ದರೂ, ಅಂದು ಸೋಷಿಯಲ್ ಮೀಡಿಯಾ ಇಷ್ಟೊಂದು ಸಕ್ರಿಯವಾಗಿರದ ಕಾರಣ ನಟ ಆರಾಮಾಗಿಯೇ ಜೀವನ ನಡೆಸುತ್ತಿದ್ದರು. ಆದರೆ ಗೌರಿ ಸ್ಪ್ರಾಟ್ ಅವರೊಂದಿಗಿನ ಈ ಮೂರನೇ ಮದುವೆ ಅವರಿಗೆ ಭಾರಿ ಆಪತ್ತು ತಂದೊಡ್ಡಿದೆ.
ಕೆಲ ದಿನಗಳ ಹಿಂದಷ್ಟೇ ಮುಸ್ಲಿಂ ಧರ್ಮಗುರುಗಳು ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಅಲ್ಲಾಹ್‌ನ ಆದೇಶಕ್ಕೆ ವಿರುದ್ಧ ಹಾಗೂ 'ಹರಾಮ್' ಎಂದು ಆಮೀರ್ ವಿರುದ್ಧ ಫತ್ವಾ ಹೊರಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಮೀರ್ ಖಾನ್, ತಾವು ಲವ್ ಜಿಹಾದ್ ಮಾಡಿಲ್ಲ ಹಾಗೂ ತಮ್ಮ ಮೂರನೇ ಪತ್ನಿ ಗೌರಿ ಹಿಂದೂ ಅಲ್ಲ, ಕ್ರಿಶ್ಚಿಯನ್ ಎಂದು ಸ್ಪಷ್ಟನೆ ನೀಡಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಎಲ್ಲ ಧರ್ಮವನ್ನೂ ಗೌರವಿಸಲಾಗುತ್ತದೆ ಎಂದು ಹೇಳಿದ್ದರು.
ಆದರೆ ಇದೀಗ ನಟ ಸಲ್ಮಾನ್ ಖಾನ್ ಬಳಿಕ ಬಿಷ್ಣೋಯಿ ಗ್ಯಾಂಗ್ ಕಣ್ಣು ಆಮೀರ್ ಖಾನ್ ಮೇಲೆ ತಿರುಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಸೇರಿದ್ದೆಂದು ಹೇಳಲಾದ ಸಾಮಾಜಿಕ ಮಾಧ್ಯಮದ ಪೋಸ್ಟ್ ಮತ್ತು ಆಡಿಯೋ ಕ್ಲಿಪ್ ವೈರಲ್ ಆಗಿದೆ. ಅರ್ಜು ಬಿಷ್ಣೋಯಿ ಮತ್ತು ಟೈಸನ್ ಬಿಷ್ಣೋಯಿ ಹೆಸರಿನಲ್ಲಿರುವ ಈ ಪೋಸ್ಟ್‌ನಲ್ಲಿ, "ಜೈ ಶ್ರೀ ರಾಮ್, ಜೈ ಸೀತಾ ರಾಮ್" ಎಂದು ಬರೆಯಲಾಗಿದೆ. ದೇಶದಲ್ಲಿ ನಮ್ಮ ಸಂಸ್ಕೃತಿಯ ವಿರುದ್ಧವಾಗಿ 'ಲವ್ ಜಿಹಾದ್' ಪ್ರಚಾರ ಮಾಡುತ್ತಿರುವ ಆಮೀರ್ ಖಾನ್‌ಗೆ ನಾವು ಈಗಾಗಲೇ ಸಾಕಷ್ಟು ಸಮಯ ನೀಡಿದ್ದು, ಇದು ನಮ್ಮ ಕೊನೆಯ ಎಚ್ಚರಿಕೆಯಾಗಿದೆ ಮತ್ತು ಶೀಘ್ರದಲ್ಲೇ ಪ್ರತಿಕ್ರಿಯಿಸುತ್ತೇವೆ ಎಂದು ಎಚ್ಚರಿಸಲಾಗಿದೆ. ಈ ಬೆದರಿಕೆ ಸಂದೇಶವು ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಬಾಲಿವುಡ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.