image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ನೇಪಾಳ ಮೂಲದ ಮೂವರು ಅಂತಾರಾಷ್ಟ್ರೀಯ ಕಳ್ಳರ ಬಂಧನ

ಮನೆಗಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ನೇಪಾಳ ಮೂಲದ ಮೂವರು ಅಂತಾರಾಷ್ಟ್ರೀಯ ಕಳ್ಳರ ಬಂಧನ

ಮಂಗಳೂರು: ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ನೇಪಾಳ ಮೂಲದ ಮೂವರು ಕುಖ್ಯಾತ ಅಂತಾರಾಷ್ಟ್ರೀಯ ಮನೆಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

​ ಕಳೆದ ಜುಲೈ 11ರಂದು ಉರ್ವ ಮಾರ್ಕೆಟ್ ಸಮೀಪದ ಮಠದಕಣಿಯ ಮನೆಯೊಂದರಲ್ಲಿ ಮಾಲೀಕರು ಇಲ್ಲದ ಸಮಯದಲ್ಲಿ ಹಿಂಬಾಗಿಲು ಒಡೆದು ನುಗ್ಗಿದ ಕಳ್ಳರು, 64 ಗ್ರಾಂ ಚಿನ್ನಾಭರಣ ಹಾಗೂ 25 ಸಾವಿರ ನಗದು ಸೇರಿದಂತೆ ಒಟ್ಟು 8,57,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಚುರುಕುಗೊಳಿಸಿದ ಬರ್ಕೆ ಪೊಲೀಸರು, ಜುಲೈ 17ರಂದು ಬೆಳಗ್ಗಿನ ಜಾವ ಬೋಳೂರಿನಲ್ಲಿ ಈ ಮೂವರನ್ನು ಬಂಧಿಸಿದ್ದಾರೆ.

​ವಿಚಾರಣೆ ವೇಳೆ ಆರೋಪಿಗಳು ತಾವು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಳ್ಳತನ ಮಾಡಿದ್ದ 790 ಗ್ರಾಂ ಬೆಳ್ಳಿ ಆಭರಣಗಳನ್ನು ಸಹ ಅಡಗಿಸಿಟ್ಟಿದ್ದು, ಪೊಲೀಸರು ಅದನ್ನೂ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಾದ ತಿಲಕ್ ಕುಮಾರ್ ಖಡ್ಕ, ಅಶೋಕ್ ರಾಜ್ ಹಾಗೂ ದಿಪೆಂದರ್ ರಸೈಲಿ ಅವರು ಕರ್ನಾಟಕದ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ 15ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ತಮಿಳುನಾಡು, ದೆಹಲಿ ಮತ್ತು ಹರ್ಯಾಣ ರಾಜ್ಯಗಳಲ್ಲೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಆರೋಪಿಗಳನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಬರ್ಕೆ ಪೊಲೀಸರು ನಡೆಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

​ಈ ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ತಂಡದಿಂದ ಯಶಸ್ವಿಯಾಗಿ ನೆರವೇರಿದೆ.

Category
ಕರಾವಳಿ ತರಂಗಿಣಿ