ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿನ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ರಾಹಿಂ, ಶರೀಪ, ಸಂದೀಪ ಪುಂಡಲಿಕ ಶೋಳಂಬಿ, ಮಹಮ್ಮದ್ ನಬಾಸ್, ಸಲ್ಮಾನ್ ಫಾರೀಸ್, ಸಿರಾಜುದ್ದೀನ್ ಮತ್ತು ಇರ್ಷಾದ್ ಎಂಬ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಮುದ್ರಣಕ್ಕೆ ಬಳಸಿದ್ದ ಭಾರಿ ಪ್ರಮಾಣದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುತೇಶ್ ಕೆ.ಪಿ. ಮತ್ತು ಸಿಬ್ಬಂದಿಗಳು ಜುಲೈ 16, 2026ರಂದು ಬೆಳಿಗ್ಗೆ ದಾಳಿ ನಡೆಸಿದರು. ಸ್ಥಳದಲ್ಲಿ ₹500 ಮುಖಬೆಲೆಯ ಒಂದು ನೈಜ ನೋಟು, 500 ರೂಪಾಯಿಯ ನೋಟುಗಳನ್ನು ಹೋಲುವ 21 ಎ-4 ಸೈಜ್ ಹಾಳೆಗಳು, ಗಣಕಯಂತ್ರ, ಝರಾಕ್ಸ್ ಮೆಷಿನ್ ಹಾಗೂ ವಿವಿಧ ಸೀಲ್ ಸೇರಿದಂತೆ ಅಪರಾಧ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 103/2026, ಬಿ.ಎನ್.ಎಸ್-2023ರ ಕಲಂ 178ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿಂದು ಮಣಿ ಆರ್.ಎನ್. (ಐ.ಪಿ.ಎಸ್), ಕೊಡಗು ಜಿಲ್ಲಾ ಸಿಬ್ಬಂದಿಗಳಾದ ಯೊಗೀಶ್ ಬಿ. ಮತ್ತು ನಿರಂಜನ್ ಎಂ.ಎನ್., ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ನಂದಕುಮಾರ್ ಮತ್ತು ಸಿಬ್ಬಂದಿಗಳಾದ ದೀಪಕ್, ಸತೀಶ್ ಹಾಗೂ ರೌಫ್ ಅವರು ಸಹಕಾರ ನೀಡಿದ್ದಾರೆ.