image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧಾರವಾಡದಲ್ಲಿ ಪತ್ನಿಯಿಂದಲೇ ವೈದ್ಯನ ಭೀಕರ ಕೊಲೆ? ಪ್ರಮುಖ ಮಾಹಿತಿ ಹಂಚಿಕೊಂಡ ಪೊಲೀಸ್ ಕಮಿಷನರ್

ಧಾರವಾಡದಲ್ಲಿ ಪತ್ನಿಯಿಂದಲೇ ವೈದ್ಯನ ಭೀಕರ ಕೊಲೆ? ಪ್ರಮುಖ ಮಾಹಿತಿ ಹಂಚಿಕೊಂಡ ಪೊಲೀಸ್ ಕಮಿಷನರ್

ಧಾರವಾಡ : ಧಾರವಾಡದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಚಿರಾಯು ಆಸ್ಪತ್ರೆಯ ಪ್ರಸಿದ್ಧ ಅನಸ್ತೇಷಿಯಾ ತಜ್ಞ ಡಾ. ಕಿರಣ್ ಹೊನ್ನಣ್ಣನವರ್ ತಮ್ಮ ಮನೆಯಲ್ಲಿಯೇ ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತ್ನಿ ಡಾ. ಪ್ರಿಯಾ (ಪ್ರಿಯಾಂಕಾ) ಅವರೇ ಗಂಡನಿಗೆ ಚಾಕು ಇರಿದು ಕೊಲೆ ಮಾಡಿ, ಬಳಿಕ ಹತ್ತು ವರ್ಷದ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಆರೋಪಿ ಪತ್ನಿಯನ್ನು ಉಪನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮಾಧ್ಯಮಗಳಿಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಡಾ. ಕಿರಣ್ ಅವರು ಸಂಜೆಯವರೆಗೂ ಫೋನ್ ಸ್ವೀಕರಿಸದಿದ್ದಾಗ ಅನುಮಾನಗೊಂಡ ಸಂಬಂಧಿಕರು ಅಕ್ಕಪಕ್ಕದವರನ್ನು ಸಂಪರ್ಕಿಸಿದ್ದಾರೆ. ಮನೆಗೆ ಬಂದು ನೋಡಿದಾಗ ಕಿರಣ್ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ 10 ವರ್ಷದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಗು ಸುರಕ್ಷಿತವಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಕೊಲೆ ನಡೆದ ಸಮಯದಲ್ಲಿ ಮನೆಯಲ್ಲಿ ದಂಪತಿ ಹಾಗೂ ಮಗು ಮಾತ್ರ ಇದ್ದರು. ಅಪಾರ್ಟ್‌ಮೆಂಟ್‌ನಲ್ಲಿ ಬಿಗಿ ಭದ್ರತೆ ಇರುವುದರಿಂದ ಹೊರಗಿನಿಂದ ಯಾರೋ ಬಂದು ಕೃತ್ಯ ಎಸಗಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಪತಿ-ಪತ್ನಿ ನಡುವಿನ ಸಂಘರ್ಷವೇ ಇದಕ್ಕೆ ಕಾರಣ ಇರಬಹುದು ಎನ್ನಲಾಗುತ್ತಿದೆ. ಆರೋಪಿ ಪತ್ನಿ ಸದ್ಯ ತೀವ್ರ ಆಘಾತದಲ್ಲಿದ್ದು, ಪೊಲೀಸರ ವಿಚಾರಣೆ ವೇಳೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಾವೂ ಕೂಡ ಯಾವುದೋ ಔಷಧ ಸೇವಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಕೊಲೆ ನಡೆದ ನಿಖರ ಸಮಯ ಹಾಗೂ ಕಾರಣ ತಿಳಿಯಲಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೂಲಂಕುಷ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ