ಮಂಗಳೂರು: ಸಿಸಿಬಿ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ, ರಾಜಧಾನಿ ದೆಹಲಿಯಿಂದ ಎಂಡಿಎಂಎ (MDMA) ಮಾದಕ ವಸ್ತುವನ್ನು ಖರೀದಿಸಿ ಮಂಗಳೂರಿಗೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 5 ಕೋಟಿ 20 ಲಕ್ಷ ರೂಪಾಯಿ ಮೌಲ್ಯದ 5 ಕೆಜಿ 196 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುದೀರ್ ರೆಡ್ಡಿ ತಿಳಿಸಿದರು. ಅವರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,
ಈ ಹಿಂದೆ, ಜೂನ್ 25, 2026 ರಂದು ಮಂಗಳೂರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಬಂಧಿಸಿ, ಆತನಿಂದ 1 ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಆರೋಪಿಗೆ ಮಾದಕ ವಸ್ತು ಪೂರೈಸುತ್ತಿದ್ದ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಈ ಸುಳಿವನ್ನು ಆಧರಿಸಿ, ಜುಲೈ 15, 2026 ರಂದು ಬೆಳ್ತಂಗಡಿ ತಾಲೂಕಿನ ಹುನಗುಂದದ ಬಳಿ ಇರುವ ರಾಯಲ್ ಇನ್ ಲಾಡ್ಜ್ ಬಳಿ ಕಾರ್ಯಾಚರಣೆ ನಡೆಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಬಂಧಿತರಾದವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಮೀನಾ ಮಂಜಿನ ಮೊಹಮ್ಮದ್ ಅಲ್ತಾಫ್ (28) ಮತ್ತು ವಿವೇಕಾನಂದ ನಗರದ ಮೊಹಮ್ಮದ್ ಮುಸ್ತಫಾ (28) ಎಂದು ಗುರುತಿಸಲಾಗಿದೆ.
ಆರೋಪಿಗಳ ವಶದಿಂದ 5 ಕೆಜಿ 196 ಗ್ರಾಂ ಎಂಡಿಎಂಎ, ಒಂದು ಕಾರು ಮತ್ತು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮೊಹಮ್ಮದ್ ಅಲ್ತಾಫ್ ಈ ಹಿಂದೆ 2024 ರಲ್ಲಿ ಕೊಣಾಜೆ ಪೊಲೀಸ್ ಠಾಣೆ ಮತ್ತು 2026 ರಲ್ಲಿ ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ ಎಂದರು. ಆರೋಪಿಗಳು ಕಾರಿನ ಮೂಲಕ ದೆಹಲಿಯಿಂದ ಮಾದಕ ವಸ್ತುವನ್ನು ತಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಪೂರೈಕೆ ಮಾಡುತ್ತಿದ್ದರು. ಈ ಮಾದಕ ವಸ್ತು ಜಾಲವನ್ನು ಬೇಧಿಸುವಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.