ಉತ್ತರ ಪ್ರದೇಶ : ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಸೋನೌಲಿ ಗಡಿಯ ಪಿಲ್ಲರ್ ಸಂಖ್ಯೆ 516 ರ ಬಳಿ ಯಾವುದೇ ವೀಸಾ, ಪಾಸ್‌ಪೋರ್ಟ್ ಸೇರಿದಂತೆ ಅಧಿಕೃತ ದಾಖಲೆಗಳಿಲ್ಲದೆ ನೇಪಾಳಕ್ಕೆ ನುಸಳಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆಯೊಬ್ಬನನ್ನು ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ) ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬಂಧಿತ ವ್ಯಕ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಜೋರ್ಡಾನ್ ಬ್ರೌನ್ (36) ಎಂದು ಗುರುತಿಸಲಾಗಿದೆ. ಈತ ಅಮೆರಿಕದ ಮಾಜಿ ನೌಕಾಪಡೆ ಅಧಿಕಾರಿಯಾಗಿದ್ದ ಎನ್ನಲಾಗಿದ್ದು, ಪ್ರಸ್ತುತ ಈತನ ಬಂಧನದ ದೃಶ್ಯಗಳು ಮತ್ತು ಈತ ಭಾರತಕ್ಕೆ ಬಂದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಭದ್ರತಾ ಸಿಬ್ಬಂದಿ ಎಂದಿನಂತೆ ಗಸ್ತಿನಲ್ಲಿದ್ದಾಗ, ಈ ವಿದೇಶಿ ಪ್ರಜೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಅಧಿಕಾರಿಗಳು ಆತನನ್ನು ನಿಲ್ಲಿಸಿ ವಿಚಾರಿಸಲು ಮುಂದಾದ ತಕ್ಷಣ, ಆತ ಅಲ್ಲಿಂದ ಓಡಲು ಯತ್ನಿಸಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರು ಬೆನ್ನಟ್ಟಿ ಆತನನ್ನು ಹಿಡಿದಿದ್ದಾರೆ. ಭದ್ರತಾ ಸಿಬ್ಬಂದಿ ಆತನನ್ನು ಅರೆಬೆತ್ತಲೆ ಸ್ಥಿತಿಯಲ್ಲೇ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ತಪಾಸಣೆ ವೇಳೆ ಬಂಧಿತ ಜೋರ್ಡಾನ್ ಬ್ರೌನ್ ನಿಂದ ಸುಮಾರು 31,460 ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳು ಸಿಕ್ಕಿವೆ. ಆದರೆ ಆತ ಯಾರು? ಎಲ್ಲಿಂದ ಬಂದ? ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆಗಳು ಸಿಕ್ಕಿಲ್ಲ.
ಪೊಲೀಸರ ತನಿಖೆ ವೇಳೆ ಈತ ಬಾಯಿಬಿಟ್ಟಿರುವ ಸತ್ಯಗಳು ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ. ಬ್ರೌನ್ ಮೊದಲು ಪ್ರವಾಸಿ ವೀಸಾದಲ್ಲಿ ಥೈಲ್ಯಾಂಡ್‌ಗೆ ಹೋಗಿದ್ದನಂತೆ. ಅಲ್ಲಿ ಆತನ ಪಾಸ್‌ಪೋರ್ಟ್ ಕಳೆದುಹೋಗಿದೆ. ಅಲ್ಲಿಂದ ಕಳ್ಳಮಾರ್ಗದ ಮೂಲಕ ಶ್ರೀಲಂಕಾ ತಲುಪಿದ್ದಾನೆ. ನಂತರ ಶ್ರೀಲಂಕಾದಿಂದಲೂ ಸಮುದ್ರ ಮಾರ್ಗದ ಮೂಲಕವೇ 2025ರ ನವೆಂಬರ್‌ನಲ್ಲಿ ಭಾರತಕ್ಕೆ ಅಕ್ರಮವಾಗಿ ನುಗ್ಗಿದ್ದಾನೆ. ಅಂದಿನಿಂದ ಈತ ಗೋವಾದಲ್ಲಿ ಅಡಗಿಕೊಂಡು ವಾಸಿಸುತ್ತಿದ್ದ. ಇತ್ತೀಚೆಗೆ ಬೆಂಗಳೂರಿಗೆ ಬಂದು, ಅಲ್ಲಿಂದ ನೇಪಾಳಕ್ಕೆ ತಪ್ಪಿಸಿಕೊಳ್ಳಲು ಸೋನೌಲಿ ಗಡಿಗೆ ಬಂದಾಗ ಲಾಕ್ ಆಗಿದ್ದಾನೆ. ಪ್ರಸ್ತುತ ಈತನ ವಿರುದ್ಧ ವಿದೇಶಿಗರ ಕಾಯ್ದೆ ಮತ್ತು ವಲಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಕೇಂದ್ರ ತನಿಖಾ ಸಂಸ್ಥೆಗಳು ಅಲರ್ಟ್ ಆಗಿವೆ.