image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ ಹಾಗೂ ಉಪ್ಪಿನಂಗಡಿಯಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಆರೋಪಿ ಬಂಧನ: 11 ಪ್ರಕರಣ ಭೇದಿಸಿದ ಪೊಲೀಸರು

ಬೆಳ್ತಂಗಡಿ ಹಾಗೂ ಉಪ್ಪಿನಂಗಡಿಯಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಅಂತರ್ ರಾಜ್ಯ ಆರೋಪಿ ಬಂಧನ: 11 ಪ್ರಕರಣ ಭೇದಿಸಿದ ಪೊಲೀಸರು

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ, ಅಂತರ್ ರಾಜ್ಯ ಕುಖ್ಯಾತ ಕಳ್ಳನನ್ನು ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡು ಕೊಯಂಬತ್ತೂರು ಮೂಲದ ಜಯಕುಮಾರ್ ವಿ. (55) ಬಂಧಿತ ಆರೋಪಿಯಾಗಿದ್ದಾನೆ.

ಕಳೆದ ಮೇ ತಿಂಗಳಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಮೂರು ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ಎರಡು ಪ್ರಕರಣಗಳು ಸೇರಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಜುಲೈ 8ರಂದು ಆರೋಪಿಯನ್ನು ದಸ್ತಗಿರಿ ಮಾಡಿದ್ದು, ಆತನ ಬಳಿಯಿದ್ದ ಕಳ್ಳತನಕ್ಕೆ ಬಳಸುತ್ತಿದ್ದ ಕಬ್ಬಿಣದ ಸಲಾಕೆ, ಸ್ಕ್ರೂ ಡ್ರೈವರ್, ಬ್ಯಾಗ್ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ದೀರ್ಘ ವಿಚಾರಣೆಯ ವೇಳೆ, ಆರೋಪಿಯು ದಕ್ಷಿಣ ಕನ್ನಡ ಜಿಲ್ಲೆಯ 5 ಪ್ರಕರಣಗಳಲ್ಲದೆ, ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯ ಒಂದು ಪ್ರಕರಣ, ಕೇರಳ ರಾಜ್ಯದ ನಾಲ್ಕು ಪೊಲೀಸ್ ಠಾಣೆಗಳ ತಲಾ ಒಂದು ಪ್ರಕರಣ ಹಾಗೂ ಬೆಂಗಳೂರಿನ ಒಂದು ಪ್ರಕರಣ ಸೇರಿದಂತೆ ಒಟ್ಟು 11 ಸರಣಿ ಕಳ್ಳತನಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆಯು ಬೆಳ್ತಂಗಡಿ ಪೊಲೀಸ್ ನಿರೀಕ್ಷಕ (ಪ್ರಭಾರ) ರವಿ ಬಿ.ಎಸ್. ಮತ್ತು ಉಪ್ಪಿನಂಗಡಿ ಪೊಲೀಸ್ ನಿರೀಕ್ಷಕ ನಾಗರಾಜ್ ಅವರ ನೇತೃತ್ವದಲ್ಲಿ ನಡೆದಿದೆ. ತನಿಖಾ ತಂಡದಲ್ಲಿ ಬೆಳ್ತಂಗಡಿ ಪಿಎಸ್‌ಐಗಳಾದ ಆನಂದ ಎಂ. ಮತ್ತು ಸಿಕಂದರ್ ಪಾಷಾ, ಉಪ್ಪಿನಂಗಡಿ ಪಿಎಸ್‌ಐ ಸುತೇಶ್ ಕೆ.ಪಿ. ಹಾಗೂ ಪೊಲೀಸ್ ಸಿಬ್ಬಂದಿಗಳಾದ ಪಂಪಾಪತಿ, ಗಿರೀಶ್, ಹೇಮರಾಜ್ ಎಚ್.ಪಿ., ಹರ್ಷಿತ್, ಪ್ರಕಾಶ್ ಮತ್ತು ಸಿಡಿಆರ್ ವಿಭಾಗದ ಸಂಪತ್ ಹಾಗೂ ದಿವಾಕರ್ ಅವರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ