ಕಡಬ : ಕಡಬ ಪೇಟೆಯಲ್ಲಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಡಬ ಪೊಲೀಸರು ವಶಕ್ಕೆ ಪಡೆದ ಘಟನೆ ಜುಲೈ 3 ರಂದು ನಡೆದಿದೆ. ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದರು. ಈ ವೇಳೆ, ತಾವು ಬ್ಯಾಂಕ್‌ನಲ್ಲಿ ಸುಮಾರು 120 ಗ್ರಾಂ ಚಿನ್ನವನ್ನು ಅಡವಿಡಲು ಬಂದಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಅವರ ವರ್ತನೆಯಲ್ಲಿ ಕಂಡುಬಂದ ಅನುಮಾನದಿಂದಾಗಿ ಪೊಲೀಸರು ಅವರನ್ನು ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದಾರೆ. ತನಿಖೆಯ ವೇಳೆ ಅವರು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಮತ್ತು ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ. ಅವರ ಬಳಿಯಿದ್ದ ಚಿನ್ನದ ಆಭರಣಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಒದಗಿಸಲು ವಿಫಲರಾದ ಆರೋಪಿಗಳು, ಚಿನ್ನದ ತೂಕವನ್ನು ಹೆಚ್ಚಿಸಿ ಬ್ಯಾಂಕ್‌ಗೆ ವಂಚಿಸಿ ಹಣ ಪಡೆಯುವ ಉದ್ದೇಶದಿಂದ ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 83/2026, ಕಲಂ: 318(4), 62 ಬಿಎನ್‌ಎಸ್-2023 ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.