ಮಂಗಳೂರು : ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಸರ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಸುರತ್ಕಲ್‌ನ ಕಾಟಿಪಳ್ಳ ನಿವಾಸಿ ಮೊಹಮ್ಮದ್ ಅಬ್ದುಲ್ ಜಾಫರ್ (28) ಬಂಧಿತ ಆರೋಪಿಯಾಗಿದ್ದು, ಆತನಿಂದ ಕಳವು ಮಾಡಲಾಗಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೂನ್ 26 ರಂದು ತಡರಾತ್ರಿ ಚೊಕ್ಕಬೆಟ್ಟು ಅಜಾದ್ ನಗರದ ನಿವಾಸಿ ಜಾಹೀದ್ ಎಂಬವರು ಮನೆಯ ಬೆಡ್ ರೂಮ್‌ನಲ್ಲಿ ಮಲಗಿದ್ದಾಗ, ಕಿಟಿಕಿ ಮೂಲಕ ಕೈಹಾಕಿದ ಆರೋಪಿ ಅವರ ಕುತ್ತಿಗೆಯಲ್ಲಿದ್ದ 20,000 ರೂಪಾಯಿ ಮೌಲ್ಯದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಇದಾದ ಮರುದಿನವೇ ಅಂದರೆ ಜೂನ್ 27 ರ ಮುಂಜಾನೆ, ಚೊಕ್ಕಬೆಟ್ಟಿನ 8ನೇ ಬ್ಲಾಕ್‌ನ ಫಯಾಜ್ ಎಂಬವರು ಮಸೀದಿಗೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಆರೋಪಿ, ಮನೆಗೆ ನುಗ್ಗಿ ಮಲಗಿದ್ದ ಅಪ್ರೀನಾ ಎಂಬವರ ಕುತ್ತಿಗೆಯಿಂದ ಸುಮಾರು 1,00,000 ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ. ಈ ಎರಡೂ ಪ್ರಕರಣಗಳು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುರತ್ಕಲ್ ಪೊಲೀಸರು ಮಾಹಿತಿ ಕಲೆಹಾಕಿ, ಜೂನ್ 29 ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್‌ನನ್ನು ಚಿನ್ನಾಭರಣ ಸಹಿತ ದಸ್ತಗಿರಿ ಮಾಡಿದ್ದಾರೆ. ಬಂಧಿತನಿಂದ ಎರಡು ಪ್ರಕರಣಗಳಿಗೆ ಸಂಬಂಧಿಸಿದ ಚಿನ್ನದ ಸರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಜಾಫರ್ ವಿರುದ್ಧ ಈಗಾಗಲೇ ಸುರತ್ಕಲ್ ಮತ್ತು ಉರ್ವಾ ಪೊಲೀಸ್ ಠಾಣೆಗಳಲ್ಲಿ ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.