ಮುಂಬೈ : ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ನಡೆದ ಮುಹರಂ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ವಿಷದ ಮಾತ್ರೆಗಳನ್ನು ವಿತರಿಸಿ ಸಾಮೂಹಿಕ ಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಫಯಾಜ್ ಪ್ರೇಮ್‌ಜಿ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರೇ ರಸ್ತೆಯಲ್ಲಿರುವ ರಹಮತಾಬಾದ್ ಸ್ಮಶಾನದ ಬಳಿ ನಡೆದ ಆಶುರಾ ಮೆರವಣಿಗೆಯ ಸಂದರ್ಭದಲ್ಲಿ ಜನಸಂದಣಿಯ ದುರುಪಯೋಗ ಪಡೆದುಕೊಂಡ ಆರೋಪಿ, ಇವು ನೋವು ನಿವಾರಕ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳೆಂದು ಜನರನ್ನು ನಂಬಿಸಿ ಹಂಚಿದ್ದನು. ಈ ಮಾತ್ರೆಗಳನ್ನು ಸೇವಿಸಿದ ಸುಮಾರು 11 ಜನರು ತೀವ್ರ ದೈಹಿಕ ಅಸ್ವಸ್ಥತೆಗೆ ಒಳಗಾದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ತನಿಖೆಯ ವೇಳೆ ಆರೋಪಿ ಹಂಚಿದ ಕ್ಯಾಪ್ಸುಲ್‌ಗಳಲ್ಲಿ ಇಲಿ ಪಾಷಾಣ ಹಾಗೂ ಕೀಟನಾಶಕಗಳಲ್ಲಿ ಬಳಸುವ ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿ ರಾಸಾಯನಿಕವಾದ 'ಜಿಂಕ್ ಫಾಸ್ಫೈಡ್' ಇರುವುದು ದೃಢಪಟ್ಟಿದೆ. ವಿಚಾರಣೆಯ ಸಂದರ್ಭದಲ್ಲಿ, ಮೆರವಣಿಗೆಯಲ್ಲಿದ್ದ ಕನಿಷ್ಠ 15,000 ಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡುವುದೇ ತನ್ನ ಗುರಿಯಾಗಿತ್ತು ಎಂದು ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆದರೆ, ಈ ಸಂಚನ್ನು ಮುಂಚಿತವಾಗಿಯೇ ಪತ್ತೆಹಚ್ಚಿದ ಮೂವರು ಮಹಿಳಾ ಸ್ವಯಂಸವರ ಸಮಯಪ್ರಜ್ಞೆಯಿಂದ ಹತ್ತಾರು ಸಾವಿರ ಜನರ ಪ್ರಾಣ ಉಳಿದಿದೆ. ಫಯಾಜ್ ಪ್ರೇಮ್‌ಜಿ ಅನುಮಾನಾಸ್ಪದವಾಗಿ ಮಾತ್ರೆಗಳನ್ನು ಹಂಚುತ್ತಿರುವುದನ್ನು ಗಮನಿಸಿದ ಈ ಮಹಿಳೆಯರು, ತಕ್ಷಣವೇ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆ ಕ್ಯಾಪ್ಸುಲ್‌ಗಳನ್ನು ತೆರೆದು ಪರಿಶೀಲಿಸಿದಾಗ ಅದರೊಳಗೆ ಅನುಮಾನಾಸ್ಪದ ಪುಡಿ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ, ಮೆರವಣಿಗೆಯಲ್ಲಿದ್ದ ಯಾರೂ ಸಹ ಈ ಮಾತ್ರೆಗಳನ್ನು ಸೇವಿಸಬಾರದು ಎಂದು ಧ್ವನಿವರ್ಧಕದ ಮೂಲಕ ತಕ್ಷಣವೇ ಪ್ರಕಟಣೆ ಹೊರಡಿಸಿ ಜನರನ್ನು ಎಚ್ಚರಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಪೊಲೀಸರು ಆರೋಪಿಯಿಂದ 14,900 ವಿಷದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಇದಕ್ಕೂ ಮುನ್ನವೇ ಆತ ಭಾರಿ ಪ್ರಮಾಣದ ಮಾತ್ರೆಗಳನ್ನು ಜನರಿಗೆ ವಿತರಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದರ ಜೊತೆಗೆ, ಆರೋಪಿಯು ಬರೋಬ್ಬರಿ 30,000 ಖಾಲಿ ಕ್ಯಾಪ್ಸುಲ್‌ಗಳು ಮತ್ತು 50 ಕೆಜಿ ಫಾಸ್ಫರಸ್ ಖರೀದಿಗೆ ಆರ್ಡರ್ ಮಾಡಿದ್ದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇನ್ನು ಆತ ನೀಡಿದ ಮಾತ್ರೆಗಳನ್ನು ಸೇವಿಸಿ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 11 ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಂಧಿತ ಆರೋಪಿಗೆ ವಿದೇಶಿ ನಂಟಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಈತ ಈ ಹಿಂದೆ ಇರಾನ್ ಮತ್ತು ಇರಾಕ್ ದೇಶಗಳಿಗೆ ಭೇಟಿ ನೀಡಿರುವುದು ಪತ್ತೆಯಾಗಿದೆ. ಈ ಭೀಕರ ಸಾಮೂಹಿಕ ಹತ್ಯೆಯ ಸಂಚಿನ ಹಿಂದೆ ಯಾವುದಾದರೂ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆಯೇ ಎಂಬ ಕೋನದಲ್ಲಿ ಪೊಲೀಸರು ಇದೀಗ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ವೈದ್ಯಕೀಯ ತಜ್ಞರ ಪ್ರಕಾರ, ಜಿಂಕ್ ಫಾಸ್ಫೈಡ್ ಅತ್ಯಂತ ಪ್ರಾಣಾಪಾಯ ಉಂಟುಮಾಡುವ ವಿಷಕಾರಿ ರಾಸಾಯನಿಕವಾಗಿದೆ. ಇದು ದೇಹದೊಳಗೆ ಸೇರಿದ ತಕ್ಷಣ ಜಠರದಲ್ಲಿರುವ ಆಮ್ಲದೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗಿ, ಅತ್ಯಂತ ಮಾರಕವಾದ 'ಫಾಸ್ಫಿನ್' ಅನಿಲವನ್ನು ಬಿಡುಗಡೆ ಮಾಡುತ್ತದೆ. ಈ ಅನಿಲವು ಮಾನವ ದೇಹದ ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಮತ್ತು ಮೆದುಳಿನ ಮೇಲೆ ನೇರವಾಗಿ ದಾಳಿ ನಡೆಸಿ ಅವು ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುವಂತೆ ಮಾಡುತ್ತದೆ. ಎಲ್ಲಕ್ಕಿಂತ ಆತಂಕಕಾರಿ ವಿಷಯವೆಂದರೆ, ಈ ಭೀಕರ ವಿಷಕ್ಕೆ ಯಾವುದೇ ನಿರ್ದಿಷ್ಟ ಪ್ರತಿವಿಷ ಲಭ್ಯವಿಲ್ಲ. ಹಾಗಾಗಿ, ಇದು ದೇಹ ಸೇರಿದ ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ಹಾಗೂ ವೆಂಟಿಲೇಟರ್ ಬೆಂಬಲವನ್ನು ನೀಡುವ ಮೂಲಕ ಮಾತ್ರವೇ ಪ್ರಾಣ ಉಳಿಸಲು ಸಾಧ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.