ದಾವಣಗೆರೆ : ದಾವಣೆಗೆರೆ ಜಿಲ್ಲೆಯ ಹರಿಹರದಲ್ಲಿ ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಪಾಕಿಸ್ತಾನದ ಉಗ್ರರೊಂದಿಗೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸೊಹೇಲ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಶಂಕಿತ ಉಗ್ರ ಸೊಹೇಲ್ ಬಂಧನ ಮತ್ತು ಆತನ ಹಿನ್ನೆಲೆ ಕುರಿತು ಆತನ ಸಹೋದರ ಶೋಯೆಬ್ ಹಾಗೂ ಸಹೋದ್ಯೋಗಿಗಳು ಮಾಧ್ಯಮಗಳಿಗೆ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. ಸುಹೇಲ್‌ನ ಸಹೋದರ ಶೋಯೆಬ್ ಮಾಧ್ಯಮಗಳೊಂದಿಗೆ ಮಾತನಾಡಿ, ಎರಡು ತಿಂಗಳ ಹಿಂದೆಯಷ್ಟೇ ನಾನು ಸುಹೇಲ್‌ಗೆ ಮೊಬೈಲ್ ಕೊಡಿಸಿದ್ದೆ. ಆದರೆ ಪಾಕಿಸ್ತಾನ ಮೂಲದ ಗ್ರೂಪ್‌ಗಳಿಗೆ ಆತನ ನಂಬರ್ ಹೇಗೆ ಆಯಡ್ ಆಯ್ತು ಎಂಬುದು ನಮಗೆ ಗೊತ್ತಿಲ್ಲ. ನಾವು ಮೂಲತಃ ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯವರಾಗಿದ್ದು, ಇತ್ತೀಚೆಗಷ್ಟೇ ನಮ್ಮ ಆಧಾರ್ ಕಾರ್ಡ್ ವಿಳಾಸವನ್ನು ಅಪ್ಡೇಟ್ ಮಾಡಿಸಿದ್ದೇವೆ. ಸುಹೇಲ್ ಇನ್ನು ಚಿಕ್ಕ ವಯಸ್ಸಿನವನಾಗಿದ್ದರಿಂದ ನನ್ನ ಐಡಿ ಮತ್ತು ಆಧಾರ್ ಕಾರ್ಡ್ ಬಳಸಿ ಆತನಿಗೆ ಸಿಮ್ ಕಾರ್ಡ್ ಕೊಡಿಸಲಾಗಿತ್ತು ಎಂದು ಸ್ಪಷ್ಟಪಡಿಸಿದ್ದಾನೆ.
ತಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದ ಶೋಯೆಬ್, ನಮ್ಮ ತಂದೆ ತಾಯಿಗೆ ಒಟ್ಟು ಹತ್ತು ಜನ ಮಕ್ಕಳಿದ್ದಾರೆ. ಇವರಲ್ಲಿ ಆರು ಜನ ಸಹೋದರಿಯರು ಹಾಗೂ ನಾಲ್ವರು ಸಹೋದರರಿದ್ದು, ಸುಹೇಲ್ ಎಲ್ಲರಿಗಿಂತ ಕೊನೆಯವನಾಗಿದ್ದಾನೆ. ಈ ಹಿಂದೆ ನಾವು ದೆಹಲಿ, ನೋಯ್ಡಾ ಸೇರಿದಂತೆ ದೇಶದ ಹಲವೆಡೆ ಕಾರ್ಮಿಕರಾಗಿ ಕೆಲಸ ಮಾಡಿದ್ದೇವೆ. ಪಾಕಿಸ್ತಾನದ ಗ್ರೂಪ್‌ಗಳಲ್ಲಿ ಆತನನ್ನು ಯಾರು ಆಯಡ್ ಮಾಡಿದ್ದಾರೆ ಮತ್ತು ಅದರಲ್ಲಿ ಏನೆಲ್ಲಾ ಮಾತುಕತೆ ನಡೆದಿದೆ ಎಂಬ ಯಾವುದೇ ಮಾಹಿತಿ ನಮಗಿಲ್ಲ. ಪೊಲೀಸರು ದಿಢೀರನೆ ಆಗಮಿಸಿ ನಮ್ಮಲ್ಲಿದ್ದ 8 ಜನರನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದರು. ಬಳಿಕ ಆತನ ಮೊಬೈಲ್‌ನಲ್ಲಿ ಏನು ಪತ್ತೆಯಾಗಿದೆಯೋ ಗೊತ್ತಿಲ್ಲ, ಸದ್ಯ ತಮ್ಮನನ್ನು ಅರೆಸ್ಟ್ ಮಾಡಿ ಕೋರ್ಟ್‌ಗೆ ಹಾಜರು ಪಡಿಸಿ ಜೈಲಿಗೆ ಕಳಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾನೆ. ಈ ವಿಷಯವನ್ನು ಉತ್ತರ ಪ್ರದೇಶದಲ್ಲಿರುವ ತಂದೆ ತಾಯಿಗೆ ತಿಳಿಸಲಾಗಿದ್ದು, ಅವರು ನಾಳೆ ಅಥವಾ ನಾಡಿದ್ದು ದಾವಣೆಗೆರೆಗೆ ಬರಲಿದ್ದಾರೆ ಎಂದು ಶೋಯೆಬ್ ತಿಳಿಸಿದ್ದಾನೆ.
ಇದೇ ವೇಳೆ, ಹರಿಹರದಲ್ಲಿ ಸುಹೇಲ್ ಜೊತೆಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಜಹೇದ್ ಹಾಗೂ ಇತರ ಕಾರ್ಮಿಕರು ಈ ಬಂಧನ ಕುರಿತು ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಾವೆಲ್ಲರೂ ಕೇವಲ 10 ರಿಂದ 15 ದಿನಗಳ ಹಿಂದೆಯಷ್ಟೇ ಇಲ್ಲಿಗೆ ಕೆಲಸಕ್ಕೆ ಬಂದಿರುವುದಾಗಿ ತಿಳಿಸಿರುವ ಅವರು, ನಾವೆಲ್ಲರೂ ಬಡ ಕಾರ್ಮಿಕರು, ನಮಗೇನು ಗೊತ್ತಿಲ್ಲ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ. ಸುಹೇಲ್ ಹಾಗೂ ಆತನ ಸಹೋದರ ಇಬ್ಬರೂ ಜೊತೆಯಲ್ಲೇ ಕೆಲಸ ಮಾಡುತ್ತಿದ್ದರು, ಆದರೆ ಈಗ ಇಬ್ಬರೂ ಇಲ್ಲಿಂದ ಹೋಗಿದ್ದಾರೆ. ನಮಗೆ ಅವರ ವೈಯಕ್ತಿಕ ವಿಚಾರಗಳಾಗಲಿ ಅಥವಾ ಉಗ್ರ ಸಂಘಟನೆಗಳ ಲಿಂಕ್ ಕುರಿತಾಗಲಿ ಯಾವುದೇ ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಸಹೋದ್ಯೋಗಿಗಳು ಹೇಳಿಕೆ ನೀಡಿದ್ದಾರೆ. ಸದ್ಯ ಪೊಲೀಸರು ಈ ಇಡೀ ಜಾಲದ ಕುರಿತು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.