image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಡಿವಾಳದಲ್ಲಿ ಅಕ್ರಮ ಮನಿ ಟ್ರೇಡಿಂಗ್ ನೆಪದಲ್ಲಿ ₹20 ಲಕ್ಷ ಸುಲಿಗೆ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ

ಮಡಿವಾಳದಲ್ಲಿ ಅಕ್ರಮ ಮನಿ ಟ್ರೇಡಿಂಗ್ ನೆಪದಲ್ಲಿ ₹20 ಲಕ್ಷ ಸುಲಿಗೆ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ

ಬೆಂಗಳೂರು : ಕಾನೂನು ರಕ್ಷಕರೇ ಭಕ್ಷಕರಾದ ಮಾದರಿಯಲ್ಲಿ, ಅಕ್ರಮ ಮನಿ ಟ್ರೇಡಿಂಗ್ ಆರೋಪದಡಿ ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ಸುಲಿಗೆ ಮಾಡಿದ ಗಂಭೀರ ಪ್ರಕರಣವೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ದರೋಡೆ ಕೃತ್ಯದಲ್ಲಿ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಇನ್ಸ್‌ಪೆಕ್ಟರ್‌ವೊಬ್ಬರು ಪ್ರಮುಖವಾಗಿ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಇಲಾಖೆಗೆ ತೀವ್ರ ಮುಜುಗರ ಉಂಟುಮಾಡಿದೆ. ನಗರದ ಮಡಿವಾಳದ ಖಾಸಗಿ ಹೋಟೆಲ್ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ಸಿಐಡಿಯ ಒಬ್ಬ ಇನ್ಸ್‌ಪೆಕ್ಟರ್ ಹಾಗೂ ಉಪೇಂದ್ರ ಮತ್ತು ಕುಮಾರ್ ಎಂಬ ಇಬ್ಬರು ಖಾಸಗಿ ವ್ಯಕ್ತಿಗಳ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಿಂದ ಆರೋಪಿ ಇನ್ಸ್‌ಪೆಕ್ಟರ್ ತಲೆಮರೆಸಿಕೊಂಡಿದ್ದು, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸುಜೀತಾ ಸಲ್ಮಾನ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.

​ಕೇರಳ ಮೂಲದ ಇಬ್ಬರು ವ್ಯಕ್ತಿಗಳು ₹20 ಲಕ್ಷ ನಗದು ಹಣದೊಂದಿಗೆ ಬೆಂಗಳೂರಿಗೆ ಬಂದು ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಆರೋಪಿಗಳು, ಹೋಟೆಲ್‌ಗೆ ತೆರಳಿ 'ಅಕ್ರಮ ಮನಿ ಟ್ರೇಡಿಂಗ್' ವ್ಯವಹಾರ ನಡೆಸುತ್ತಿರುವ ಆರೋಪದಡಿ ಅವರನ್ನು ತೀವ್ರವಾಗಿ ಬೆದರಿಸಿದ್ದಾರೆ. ಆರೋಪಿಗಳು ಅಧಿಕೃತ ಪೊಲೀಸ್ ಜೀಪ್‌ನಲ್ಲೇ ಹೋಟೆಲ್ ಬಳಿ ಬಂದಿದ್ದಲ್ಲದೆ, ಸಂತ್ರಸ್ತರಿಗೆ ಪೊಲೀಸ್ ಐಡಿ ಕಾರ್ಡ್ ಪ್ರದರ್ಶಿಸಿ ಕಾನೂನು ಕ್ರಮದ ಭಯ ಹುಟ್ಟಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.​"ಯಾಕೆ ಹಣ ತಂದಿದ್ದೀರಾ?" ಎಂದು ಹೆದರಿಸಿ, ಹಲ್ಲೆ ನಡೆಸಿ ಕೊಠಡಿಯಲ್ಲಿದ್ದ ₹20 ಲಕ್ಷ ಹಣವನ್ನು ಲೂಟಿ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ದರೋಡೆ ಕೃತ್ಯದಲ್ಲಿ ಇನ್ಸ್‌ಪೆಕ್ಟರ್ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ಉಪೇಂದ್ರ ಮತ್ತು ಕುಮಾರ್ ಎಂಬ ಇಬ್ಬರು ಖಾಸಗಿ ವ್ಯಕ್ತಿಗಳು ನೇರವಾಗಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ತಾವಿಬ್ಬರು ಸಂಪೂರ್ಣವಾಗಿ ಲೂಟಿಯಾಗಿದ್ದೇವೆ ಎಂದು ಅರಿತ ಕೇರಳದ ಯುವಕರು ತಕ್ಷಣವೇ ಮಡಿವಾಳ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ.

​ಈ ಇಡೀ ಹಗರಣದ ಕುರಿತು ಅಧಿಕೃತ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, "ಮಡಿವಾಳ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಕೆಲವು ಖಾಸಗಿ ವ್ಯಕ್ತಿಗಳು ತಾವು ಪೊಲೀಸ್ ಎಂದು ಹೇಳಿಕೊಂಡು ಆ ಹೋಟೆಲ್‌ಗೆ ಹೋಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಮತ್ತೊಂದು ಮಹತ್ವದ ಮಾಹಿತಿಯ ಪ್ರಕಾರ, ಸಿಐಡಿಯ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರು ಸಹ ಈ ದರೋಡೆಯಲ್ಲಿ ಶಾಮಿಲಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಲಾಗಿದೆ‌. ಕೃತ್ಯಕ್ಕೆ ಬಳಸಲಾಗಿದ್ದ ಇಲಾಖೆಯ ವಾಹನ ಹಾಗೂ ಲೂಟಿ ಮಾಡಲಾಗಿದ್ದ ಹಣವನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ದೂರುದಾರ ವ್ಯಕ್ತಿಗಳ ಹಿನ್ನೆಲೆ ಏನು ಮತ್ತು ಅವರು ತಂದಿದ್ದ 20 ಲಕ್ಷ ರೂಪಾಯಿ ಹಣ ಎಲ್ಲಿಂದ ಬಂತು ಎಂಬ ಮೂಲದ ಕುರಿತು ಸಹ ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ಸ್‌ಪೆಕ್ಟರ್ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Category
ಕರಾವಳಿ ತರಂಗಿಣಿ