image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಳಗಾವಿ ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಸಿಐಡಿ ಡಿಐಜಿ ಮಹತ್ವದ ಜಂಟಿ ಸುದ್ಧಿಗೋಷ್ಠಿ

ಬೆಳಗಾವಿ ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಸಿಐಡಿ ಡಿಐಜಿ ಮಹತ್ವದ ಜಂಟಿ ಸುದ್ಧಿಗೋಷ್ಠಿ

ಬೆಳಗಾವಿ : ಬೆಳಗಾವಿ ಮೂಲದ ಶಿವಂ ಅಸೋಸಿಯೇಟ್ಸ್ ಕಂಪನಿಯ ಸಾವಿರಾರು ಕೋಟಿ ರೂಪಾಯಿಗಳ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಅತಿಥಿ ಗೃಹದಲ್ಲಿ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಡಿಐಜಿ ಡಾ. ಭೀಮಾಶಂಕರ್ ಗುಳೇದ್ ಅವರು ಮಾಧ್ಯಮಗಳೊಂದಿಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ತನಿಖಾ ಹಂತದಲ್ಲಿ ಸುದ್ಧಿಗೋಷ್ಠಿ ನಡೆಸದಿದ್ದರೂ, ಪ್ರಕರಣದ ಗಾಂಭೀರ್ಯತೆ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅನಿವಾರ್ಯತೆಯಿಂದಾಗಿ ಈ ಪ್ರಕಟಣೆ ನೀಡಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸುಮಾರು ಇಪ್ಪತ್ತು ದಿನಗಳ ಹಿಂದೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಜಂಟಿ ತಂಡವು ಶಿವಂ ಅಸೋಸಿಯೇಟ್ಸ್ ಕಂಪನಿಯ ಮೇಲೆ ದಾಳಿ ನಡೆಸಿತ್ತು. ಸಾರ್ವಜನಿಕರಿಗೆ ಹೆಚ್ಚಿನ ಲಾಭದ ಆಮಿಷವೊಡ್ಡಿ ಕಾನೂನುಬಾಹಿರವಾಗಿ ಠೇವಣಿ ಸಂಗ್ರಹಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಪ್ರಕರಣದ ವ್ಯಾಪ್ತಿ ದೊಡ್ಡದಾಗಿರುವುದರಿಂದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ.

ಆದರೆ, ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಾದ ನಂತರವೂ ಸಾರ್ವಜನಿಕರು ಎಚ್ಚೆತ್ತುಕೊಳ್ಳದೆ ಈವರೆಗೆ ಸುಮಾರು ಐದು ಕೋಟಿ ರೂಪಾಯಿಗಳನ್ನು ಮತ್ತೆ ಹೂಡಿಕೆ ಮಾಡಿರುವುದು ತನಿಖಾ ಸಂಸ್ಥೆಗೆ ಆತಂಕ ತಂದಿದೆ. ಹಳೆಯ ಹೂಡಿಕೆದಾರರು ತಾವು ಸಿಲುಕಿಕೊಂಡಿರುವ ಕಾರಣಕ್ಕೆ ಅಥವಾ ಅರಿವಿಲ್ಲದೆ ಬೇರೆಯವರಿಗೂ ಹಣ ಹೂಡುವಂತೆ ಪ್ರೇರೇಪಿಸುತ್ತಿದ್ದಾರೆ. ಕಂಪನಿಯ ಮುಖ್ಯಸ್ಥ ಶಿವಾನಂದ ನೀಲಣ್ಣವರ್ ಇಲ್ಲಿಯವರೆಗೆ ಜನರಿಗೆ ನಿಯಮಿತವಾಗಿ ದುಡ್ಡು ತಲುಪಿಸುತ್ತಿದ್ದ ಎಂಬ ಕಾರಣಕ್ಕೆ, ಜಿಲ್ಲಾಡಳಿತವೇ ಪಿತೂರಿ ನಡೆಸಿ ದಾಳಿ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇಂತಹ ದಿಕ್ಕು ತಪ್ಪಿಸುವ ಚರ್ಚೆಗಳಲ್ಲಿ ಭಾಗಿಯಾಗುವವರಿಗೂ ನೋಟೀಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಡಿಐಜಿ ಎಚ್ಚರಿಕೆ ನೀಡಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಂದ ಯಾವುದೇ ಅಧಿಕೃತ ಬ್ಯಾಂಕಿಂಗ್ ಅನುಮತಿ ಪಡೆಯದೇ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದು ಗಂಭೀರ ಅಪರಾಧವಾಗಿದೆ. ಶಿವಾನಂದ ನೀಲಣ್ಣವರ್ ಒಡೆತನದ ಸಂಸ್ಥೆ ಹಾಗೂ ಆದಿತ್ಯರಾಜ ಕ್ಯಾಪಿಟಲ್ ಎಂಬ ಮತ್ತೊಂದು ಕಂಪನಿ ಯಾವುದೇ ರೀತಿಯ ಕಾನೂನುಬದ್ಧ ಅನುಮತಿ ಪಡೆದಿಲ್ಲ. ಮಾರುಕಟ್ಟೆಯಲ್ಲಿ ಶೇಕಡಾ 36 ರಿಂದ 60 ರಷ್ಟು ದೊಡ್ಡ ಪ್ರಮಾಣದ ಲಾಭಾಂಶ ಕೊಡುವ ಯಾವುದೇ ಬ್ಯಾಂಕಿಂಗ್ ವ್ಯವಹಾರ ಅಸ್ತಿತ್ವದಲ್ಲಿಲ್ಲ. ಸಾರ್ವಜನಿಕರು ಇಂತಹ ಆಮಿಷಗಳಿಂದ ದೂರವಿರಬೇಕು ಮತ್ತು ಯಾರಾದರೂ ಇಂತಹ ಹೂಡಿಕೆಗೆ ಪ್ರೇರೇಪಿಸಿದರೆ ತಕ್ಷಣ ಪೊಲೀಸರಿಗೆ ದೂರು ನೀಡಬೇಕು ಎಂದು ಡಾ. ಭೀಮಾಶಂಕರ್ ಗುಳೇದ್ ಮನವಿ ಮಾಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಶಿವಾನಂದ ನೀಲಣ್ಣವರ್ ಹೊಸದಾಗಿ ಬರುವ ಹೂಡಿಕೆದಾರರ ಹಣವನ್ನು ಬಳಸಿ ಹಳೆಯ ಹೂಡಿಕೆದಾರರಿಗೆ ಬಡ್ಡಿ ಪಾವತಿಸುತ್ತಿದ್ದ ಪೋಂಜಿ ಮಾದರಿಯ ವಂಚನೆ ಸಾಬೀತಾಗಿದೆ. ಹೊಸದಾಗಿ ಬರುವ ಹಣಕ್ಕಿಂತ ಬಡ್ಡಿ ರೂಪದಲ್ಲಿ ನೀಡಬೇಕಾದ ಮೊತ್ತ ಹೆಚ್ಚಾದಾಗ ಇಡೀ ವ್ಯವಸ್ಥೆ ಕುಸಿದುಬೀಳುತ್ತದೆ. ಇದುವರೆಗೆ ಈತ ಸಾರ್ವಜನಿಕರಿಂದ ಒಟ್ಟು 2,400 ಕೋಟಿ ರೂಪಾಯಿ ಹಣ ಸಂಗ್ರಹಿಸಿದ್ದು, ಅದರಲ್ಲಿ ಬಹುಪಾಲು ಮೊತ್ತವನ್ನು ಜನರಿಗೆ ಹಿಂತಿರುಗಿಸಿದ್ದಾನೆ. ಇನ್ನುಳಿದ ಹಣದಲ್ಲಿ 540 ಕೋಟಿ ರೂಪಾಯಿಗಳನ್ನು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ್ದು, ಅದರಲ್ಲಿ ಈಗಾಗಲೇ 170 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾನೆ. ಒಟ್ಟಾರೆ ತನಿಖೆಯಲ್ಲಿ ಸದ್ಯ 660 ಕೋಟಿ ರೂಪಾಯಿಗಳ ಕೊರತೆ (ಶಾರ್ಟೇಜ್) ಕಂಡುಬಂದಿದ್ದು, ಈ ಪೈಕಿ 330 ಕೋಟಿ ರೂಪಾಯಿಗಳನ್ನು ರಿಕವರಿ ಮಾಡಬಹುದು ಎಂದು ಅಂದಾಜಿಸಲಾಗಿದೆ.

ಈ ವಂಚನೆ ಜಾಲದಲ್ಲಿ ಸುಮಾರು 40,700 ಜನ ಹೂಡಿಕೆ ಮಾಡಿರುವುದು ಪತ್ತೆಯಾಗಿದ್ದು, ನೀಲಣ್ಣವರ್ ಜೊತೆಗೆ ಇನ್ನೊಬ್ಬ ಪಾಲುದಾರ ಶಾಮೀಲಾಗಿದ್ದಾನೆ. ಕಂಪನಿಯ ಅಕ್ರಮ ಹಣದಿಂದ ನೀಲಣ್ಣವರ್ ತನ್ನ ಸ್ವಂತ ಬಳಕೆಗೆ 55 ಕೋಟಿ ರೂಪಾಯಿ ವರ್ಗಾಯಿಸಿಕೊಂಡಿದ್ದಾನೆ. ತನಿಖಾಧಿಕಾರಿಗಳು ಈಗಾಗಲೇ 5 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದು, ಇನ್ನುಳಿದ 11 ವೋಲ್ವೋ ಎಕ್ ಸಿ 90 ಕಾರುಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಿದ್ದಾರೆ.

ಹೂಡಿಕೆದಾರರಿಗೆ ಇದುವರೆಗೆ ಒಟ್ಟು 400 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಂದಾಯವಾಗಿದ್ದು, ಆ ಹಣವನ್ನು ವಾಪಸ್ ಪಡೆದು ಬಾಕಿ ಇರುವ ಇತರ ಹೂಡಿಕೆದಾರರಿಗೆ ಹಂಚಲಾಗುವುದು. ತನಿಖೆಯ ವೇಳೆ ಪತ್ತೆಯಾಗಿರುವ 30 ಬ್ಯಾಂಕ್ ಖಾತೆಗಳ ಪೈಕಿ 7 ಖಾತೆಗಳಲ್ಲಿ ಭಾರಿ ಪ್ರಮಾಣದ ನಗದು ವರ್ಗಾವಣೆಯಾಗಿದೆ. ಒಂದೇ ಖಾತೆಯು ಬರೋಬ್ಬರಿ 36,200 ಪುಟಗಳಷ್ಟು ವಹಿವಾಟು ಹೊಂದಿದ್ದು, ಪರಿಶೀಲನೆ ಮುಂದುವರಿದಿದೆ. ಶಿವಂ ಅಸೋಸಿಯೇಟ್ಸ್‌ನಿಂದ ಚಿತ್ರರಂಗದ ತಾರೆಯರಿಗೆ ಹಣ ಸಂದಾಯವಾಗಿರುವ ಅನುಮಾನವಿದ್ದು, ಸಾಕ್ಷ್ಯಾಧಾರಗಳು ಸಿಕ್ಕರೆ ಅವರಿಗೂ ನೋಟೀಸ್ ಜಾರಿ ಮಾಡಲಾಗುತ್ತದೆ. ನೆರೆರಾಜ್ಯವಾದ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಹೂಡಿಕೆದಾರರಿರುವುದು ಪತ್ತೆಯಾಗಿದ್ದು, ಅಲ್ಲಿನ ಪೊಲೀಸರ ಸಹಕಾರದೊಂದಿಗೆ ಸಿಐಡಿ ತಂಡ ಜಂಟಿ ತನಿಖೆ ಚುರುಕುಗೊಳಿಸಿದೆ.

Category
ಕರಾವಳಿ ತರಂಗಿಣಿ