image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾದಕವಸ್ತು ಮಾರಾಟ ಜಾಲ ಭೇದಿಸಿದ ಸಿಸಿಬಿ ಪೊಲೀಸರು: 16.40 ಲಕ್ಷ ಮೌಲ್ಯದ ಎಂಡಿಎಂಎ ವಶ

ಮಾದಕವಸ್ತು ಮಾರಾಟ ಜಾಲ ಭೇದಿಸಿದ ಸಿಸಿಬಿ ಪೊಲೀಸರು: 16.40 ಲಕ್ಷ ಮೌಲ್ಯದ ಎಂಡಿಎಂಎ ವಶ

ಮಂಗಳೂರು: ನಗರದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಅಪರಾಧ ವಿಭಾಗದ (CCB) ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳ ಮೂಲಕ ಬಂಧಿಸಿದ್ದಾರೆ.

ಜೂನ್ 5, 2026ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 164 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಅಂದಾಜು 16.40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮೊದಲ ಪ್ರಕರಣದಲ್ಲಿ, ಹೊಯಿಗೆ ಬಜಾರ್ ನಿವಾಸಿ ಪ್ರಣಾಮ್ ಕೋಟ್ಯಾನ್ (30) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 10.40 ಲಕ್ಷ ರೂ. ಮೌಲ್ಯದ 104 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ.

ಆರೋಪಿಯ ಮೇಲೆ ಈ ಹಿಂದೆ ಗಾಂಜಾ ಮಾರಾಟ ಮತ್ತು ಸೇವನೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಎರಡನೇ ಪ್ರಕರಣದಲ್ಲಿ, ಪದವಿನಂಗಡಿ ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಧನರಾಜ್ ಪೂಜಾರಿ ಅಲಿಯಾಸ್ ಧನು ವಳಚಿಲ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತನಿಂದ 6 ಲಕ್ಷ ರೂ. ಮೌಲ್ಯದ 60 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಧನರಾಜ್ ವಿರುದ್ಧ ಈಗಾಗಲೇ ಕೊಲೆ, ಕೊಲೆಯತ್ನ ಮತ್ತು ಹಲ್ಲೆ ಸೇರಿದಂತೆ ಸುಮಾರು 12 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ಬಾಕಿ ಇವೆ. ಈ ಮಾದಕವಸ್ತು ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ