ಉತ್ತರಪ್ರದೇಶ : ಉತ್ತರಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಹಳ್ಳಿಯೊಂದರ ಹನುಮಾನ್ ದೇವಸ್ಥಾನದೊಳಗೆ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಈ ಸಂಬಂಧ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇ 31 ರಂದು ಔರಂಗಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಅಸರ್ ಮೊಹಮ್ಮದ್ ಮತ್ತು ಆತನ ಸಹಚರ ನಜರ್ ಮೊಹಮ್ಮದ್ ಸೇರಿದಂತೆ ಇತರರು ಗ್ರಾಮದ ರಾಜ್‌ಕುಮಾರ್ ಎಂಬುವವರ ಮನೆಗೆ ಕಲ್ಲು ಕೆಲಸಕ್ಕಾಗಿ ಹೋಗಿದ್ದರು. ಮಧ್ಯಾಹ್ನ ಕೆಲಸಕ್ಕೆ ವಿರಾಮ ನೀಡಿ ಊಟ ಮಾಡುವ ಸಮಯದಲ್ಲಿ ದಿಢೀರ್ ಮಳೆ ಬಂದಿದೆ. ಈ ವೇಳೆ ಅಸರ್ ಮೊಹಮ್ಮದ್ ಮಳೆಯಿಂದ ಬಚಾವಾಗಲು ಹತ್ತಿರದಲ್ಲೇ ಇದ್ದ ಹನುಮಾನ್ ದೇವಾಲಯದೊಳಗೆ ಪ್ರವೇಶಿಸಿ ನಮಾಜ್ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ನಜರ್ ಮೊಹಮ್ಮದ್ ಕೂಡ ಸ್ಥಳದಲ್ಲಿದ್ದರು.
ದೇವಸ್ಥಾನದೊಳಗೆ ನಮಾಜ್ ಮಾಡುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು, ಇದು ಗ್ರಾಮಸ್ಥರ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಘಟನೆ ನಡೆದಿರುವುದು ನಿಜ ಎಂದು ಕಂಡುಕೊಂಡಿದ್ದಾರೆ. ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವ ಮೂಲಕ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಕುರಿತು ಔರಂಗಾಬಾದ್‌ನ ಎಸ್‌ಎಸ್‌ಒ ಮೊಹಮ್ಮದ್ ಅಸ್ಲಾಂ ಪ್ರತಿಕ್ರಿಯಿಸಿದ್ದು, ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.