ಬೆಳ್ತಂಗಡಿ: ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಯುವಕನನ್ನು ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯತೀಶ (33) ಎಂದು ಗುರುತಿಸಲಾಗಿದೆ. ದಿನಾಂಕ: 01-06-2026 ರಂದು ಬೆಳಿಗ್ಗೆ, ವಾಟ್ಸಾಪ್ ಮೂಲಕ ಹರಿದಾಡುತ್ತಿದ್ದ ಅಪರಿಚಿತ ಮೃತದೇಹದ ಭಾವಚಿತ್ರವನ್ನು ಗಮನಿಸಿದ ಯತೀಶ ಅವರ ಸಹೋದರ ನಿತಿನ್ (34), ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತಪಟ್ಟಿದ್ದು ತಮ್ಮ ಸಹೋದರ ಎಂದು ದೃಢಪಡಿಸಿಕೊಂಡಿದ್ದಾರೆ.
ಘಟನಾಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜೂನ್ 1 ರಂದು ಬೆಳಿಗ್ಗೆ ಯತೀಶನ ಮೇಲೆ ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪದಂಗಡಿ ನಿವಾಸಿ ಇಬ್ರಾಹಿಂ (54) ಎಂಬವರು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಆರೋಪಿಗಳ ಅಮಾನುಷ ಹಲ್ಲೆಯಿಂದಲೇ ಯತೀಶ ಮೃತಪಟ್ಟಿರುವುದಾಗಿ ಸಹೋದರ ನಿತಿನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 65/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ: 115(2), 103 ಹಾಗೂ 3(5) ರ ಅನ್ವಯ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.