ಬೆಳ್ತಂಗಡಿ: ಇಲ್ಲಿನ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ ‘ಪವನ್’ ಹೆಸರಿನ ಕ್ಯಾಂಟೀನ್‌ನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ. ಕ್ಯಾಂಟೀನ್ ಮಾಲೀಕ ಸುಂದರ್ ಶೆಟ್ಟಿ ಎಂಬವರು ತನ್ನ ಪರಿಚಯದ ಉಸ್ಮಾನ್ ಎಂಬವರ ಜೊತೆ ಸೇರಿ, ಅಕ್ರಮ ಲಾಭದ ಉದ್ದೇಶದಿಂದ ಕ್ಯಾಂಟೀನ್‌ನ ಒಳಗಿನ ಕೋಣೆಯಲ್ಲಿ ಹುಡುಗಿಯರನ್ನು ಮತ್ತು ಹೆಂಗಸರನ್ನು ಕರೆಸಿಕೊಂಡು ಈ ಕೃತ್ಯ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕ (ತನಿಖೆ) ಸಿಕಂದರ್ ಪಾಷಾ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸ್ಥಳದ ಮೇಲೆ ನಿಗಾ ಇರಿಸಲಾಗಿತ್ತು. ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ, ಮೇ 10ರಂದು ಸಂಜೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹಾಗೂ ಸಿಬ್ಬಂದಿಗಳ ತಂಡ ದಿಢೀರ್ ದಾಳಿ ನಡೆಸಿದೆ. ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 48/2026, ಕಲಂ: 3, 4, 5 ಐಟಿಪಿ ಆಕ್ಟ್ ಮತ್ತು ಬಿ.ಎನ್.ಎಸ್ ಕಲಂ: 143(2) ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.