ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಅಕ್ರಮವಾಗಿ ಅಟೋರಿಕ್ಷಾದಲ್ಲಿ ದಾಸ್ತಾನು ಇರಿಸಲಾಗಿದ್ದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ದಿನಾಂಕ 09-05-2026ರಂದು ಬೆಳಿಗ್ಗೆ ಶಿವಾಜಿ ನಗರದಲ್ಲಿ ಅಕ್ರಮ ಅಕ್ಕಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಆಹಾರ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ, ಕಚೇರಿ ಸಿಬ್ಬಂದಿ ಹಾಗೂ ವಿಟ್ಲ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಮತ್ತು ತಂಡ ಸ್ಥಳಕ್ಕೆ ದಾಳಿ ನಡೆಸಿತು. ಈ ವೇಳೆ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಕೆಎ-70-ಎ-2034 ನೋಂದಣಿ ಸಂಖ್ಯೆಯ ಅಟೋರಿಕ್ಷಾದಲ್ಲಿ 15 ಚೀಲಗಳಲ್ಲಿ ತುಂಬಿಸಲಾಗಿದ್ದ ಪಡಿತರ ಅಕ್ಕಿ ಪತ್ತೆಯಾಗಿದೆ.
ವಿಚಾರಣೆ ನಡೆಸಿದಾಗ ಸ್ಥಳೀಯ ನಿವಾಸಿ ಅಲಿ ಅಕ್ಬರ್ (40) ಎಂಬಾತ ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಒಟ್ಟು 679.38 ಕೆಜಿ ತೂಕದ ಅಕ್ಕಿ (ಅಂದಾಜು ಮೌಲ್ಯ 23,098 ರೂ.) ಹಾಗೂ ಅಟೋರಿಕ್ಷಾವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.