image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ವಾರಂಟ್ ಆರೋಪಿ ಕಾಪ್ರಿ ಸಿದ್ದೀಕ್ ಬಂಧನ

8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ವಾರಂಟ್ ಆರೋಪಿ ಕಾಪ್ರಿ ಸಿದ್ದೀಕ್ ಬಂಧನ

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 2018 ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

​ಕಾಸರಗೋಡು ಜಿಲ್ಲೆಯ ಉಪ್ಪಳದ ಪಾವಲಿಕೆ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಕಾಪ್ರಿ ಸಿದ್ದೀಕ್ (ತಂದೆ ಅಬ್ದುಲ್ಲಾ) ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಮಂಗಳೂರು ನಗರದ ಉಳ್ಳಾಲ, ಕೊಣಾಜೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿದ್ದವು. ಈ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಲಯವು ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ (NBW) ಹೊರಡಿಸಿತ್ತು. ಆದರೂ ಆರೋಪಿಯು ಕಳೆದ ಎಂಟು ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದನು.

ಉಳ್ಳಾಲ ಠಾಣೆಯ ಕಳವು ಪ್ರಕರಣ (ಕ್ರೈಂ ನಂ. 74/2017), ಕೊಣಾಜೆ ಠಾಣೆಯ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣ (ಕ್ರೈಂ ನಂ. 68/2018) ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಯ ಗೋಹತ್ಯೆ ಪ್ರಕರಣಗಳಿಗೆ (ಕ್ರೈಂ ನಂ. 149/2017) ಸಂಬಂಧಿಸಿದಂತೆ ಈತ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ತಲೆಮರೆಸಿಕೊಂಡಿರುವ ವಾರಂಟ್ ಆರೋಪಿಗಳ ಪತ್ತೆಗಾಗಿ ನಗರ ಪೊಲೀಸ್ ಆಯುಕ್ತರು ರಚಿಸಿದ್ದ ವಿಶೇಷ ತಂಡದ ಪಿಎಸ್ಐ ಸಿದ್ದಪ್ಪ ಹಾಗೂ ಸಿಬ್ಬಂದಿಗಳು ಆರೋಪಿಯ ಚಲನವಲನದ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ಈ ಕಾರ್ಯಾಚರಣೆ ನಡೆಸಿದ್ದಾರೆ.
​ಬಂಧಿತ ಆರೋಪಿಯನ್ನು ಹೆಚ್ಚಿನ ಕಾನೂನು ಕ್ರಮಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Category
ಕರಾವಳಿ ತರಂಗಿಣಿ