ನವದೆಹಲಿ : ಯುಎಇಗೆ ಪರಾರಿಯಾಗಿ ಇಂಟರ್‌ಪೋಲ್‌ನ ರೆಡ್ ನೋಟಿಸ್ ಪಟ್ಟಿಯಲ್ಲಿದ್ದ ಕುಖ್ಯಾತ ವಂಚಕ ಮೊಹಮ್ಮದ್ ನವಾಸ್ ಕಕ್ಕತ್ ಇಸ್ಮಾಯಿಲ್‌ನನ್ನು ಭಾರತಕ್ಕೆ ಹಸ್ತಾಂತರಿಸುವಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ಯಶಸ್ವಿಯಾಗಿದೆ. ಸುಲಿಗೆ, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಸಂಘಟಿತ ಅಪರಾಧ ಸಿಂಡಿಕೇಟ್ ನಡೆಸುತ್ತಿದ್ದ ಆರೋಪ ಹೊತ್ತಿದ್ದ ಈತನನ್ನು ದೆಹಲಿ ಪೊಲೀಸರು ಹಲವು ದಿನಗಳಿಂದ ಹುಡುಕುತ್ತಿದ್ದರು. ದೆಹಲಿ ಪೊಲೀಸರ ಮನವಿಯ ಮೇರೆಗೆ ಸಿಬಿಐ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ಯುಎಇ ಅಧಿಕಾರಿಗಳು ಆತನನ್ನು ಬಂಧಿಸಿದ್ದು, ನಿರಂತರ ಫಾಲೋಅಪ್ ನಡೆಸಿದ ಸಿಬಿಐ ಅಧಿಕಾರಿಗಳು ಭಾನುವಾರ ಆತನನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಕರೆತಂದು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವಿಶೇಷವಾಗಿ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಪ್ರಮುಖ ಸಂಚುಕೋರನಾಗಿದ್ದ ಈತನ ಹಸ್ತಾಂತರವು ದೊಡ್ಡ ಯಶಸ್ಸು ಎಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇಂಟರ್‌ಪೋಲ್ ಸಹಯೋಗದೊಂದಿಗೆ ಸುಮಾರು 150ಕ್ಕೂ ಹೆಚ್ಚು ವಾಂಟೆಡ್ ಕ್ರಿಮಿನಲ್‌ಗಳನ್ನು ಭಾರತಕ್ಕೆ ಕರೆತರಲಾಗಿದ್ದು, ತನಿಖಾ ಸಂಸ್ಥೆಗಳ ಬಿಗಿ ಹಿಡಿತಕ್ಕೆ ಇದು ಸಾಕ್ಷಿಯಾಗಿದೆ.