image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುರತ್ಕಲ್‌ನ ಸುಮತಿ ಪ್ರಭು ಕೊಲೆ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಸುರತ್ಕಲ್‌ನ ಸುಮತಿ ಪ್ರಭು ಕೊಲೆ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ಇಲ್ಲಿನ ಕುಳಾಯಿ ಹೊಸಬೆಟ್ಟುವಿನಲ್ಲಿ 2014ರಲ್ಲಿ ನಡೆದಿದ್ದ ಶ್ರೀಮತಿ ಸುಮತಿ ಪ್ರಭು ಅವರ ಭೀಕರ ಕೊಲೆ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಆರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

​ರಾಜಸ್ಥಾನ ಮೂಲದ ಬಹುದ್ದೂರ್ ಸಿಂಗ್ ಅಲಿಯಾಸ್ ಬುಯ್ಯ (ತಂದೆ ಗೋವಿಂದ ಸಿಂಗ್) ಬಂಧಿತ ಆರೋಪಿ. ಈತ 2014ರ ಫೆಬ್ರವರಿ 8ರಂದು ಸಂಜೆ ಕುಳಾಯಿ ಹೊಸಬೆಟ್ಟುವಿನ ನಿವಾಸಿ ಸುಮತಿ ಪ್ರಭು ಅವರನ್ನು ಕುತ್ತಿಗೆ ಕೊಯ್ದು ಕೊಲೆ ಮಾಡಿ, ಅವರ ಮೈಮೇಲಿದ್ದ ಸುಮಾರು 3,80,000/- ರೂ. ಮೌಲ್ಯದ 192 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದ್ದ ಪ್ರಕರಣದ ಎರಡನೇ ಆರೋಪಿಯಾಗಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಿವರಾಮ್ ಮತ್ತು ಶಹನ್ವಾಜ್ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಜಾಮೀನಿನ ಮೇಲೆ ಹೊರಬಂದಿದ್ದ ಬಹುದ್ದೂರ್ ಸಿಂಗ್ ಕಳೆದ ಆರು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ಪರಾರಿಯಾಗಿದ್ದನು. ನ್ಯಾಯಾಲಯವು ಈತನ ವಿರುದ್ಧ ದಸ್ತಗಿರಿ ವಾರಂಟ್ ಹಾಗೂ ಉದ್ಘೋಷಣೆಯನ್ನು ಹೊರಡಿಸಿತ್ತು.
​ಆರೋಪಿಯ ಪತ್ತೆಗಾಗಿ ಸುರತ್ಕಲ್ ಠಾಣೆಯ ಹೆಚ್.ಸಿ. ಅಜಿತ್ ಮ್ಯಾಥ್ಯು, ಸಿಪಿಸಿ ಸುನೀಲ್ ಕುಸನಾಳ ಮತ್ತು ಮೋಹನ್ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ತಾಂತ್ರಿಕ ಮಾಹಿತಿ ಹಾಗೂ ಖಚಿತ ಮಾಹಿತಿಯ ಮೇರೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯಲ್ಲಿ ಬೀಡುಬಿಟ್ಟಿದ್ದ ಆರೋಪಿಯನ್ನು ಮೇ 3ರಂದು ಮಧ್ಯಾಹ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಹೆಚ್.ಸಿ. ರಾಜೇಂದ್ರ ಪ್ರಸಾದ್ ಮತ್ತು ಪಿಸಿ ಸತೀಶ್ ಅವರು ಸಹಕರಿಸಿದ್ದಾರೆ. ಬಂಧಿತ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Category
ಕರಾವಳಿ ತರಂಗಿಣಿ