ವಿಟ್ಲ: ವಾಹನ ತಪಾಸಣೆ ವೇಳೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸ್ಕೂಟರ್ ಸವಾರನೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26) ಬಂಧಿತ ಆರೋಪಿ. ಮೇ 3ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಉಪ ನಿರೀಕ್ಷಕ ಬಿ.ಎಸ್. ನಾಯಕ್ ಅವರು ಸಿಬ್ಬಂದಿಯೊಂದಿಗೆ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ KA-19-HX-0497 ನಂಬರಿನ ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಸ್ಬೀರ್‌ನನ್ನು ತಡೆದಾಗ, ಆತ ಪೊಲೀಸರೊಂದಿಗೆ ಜಗಳಕ್ಕಿಳಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಆರೋಪಿಯ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆತ ಮಾದಕ ವಸ್ತು ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ತಕ್ಷಣ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಹಾಗೂ ಬಿ.ಎನ್.ಎಸ್ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.