image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: 1,745 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ, ಅಂತಾರಾಷ್ಟ್ರೀಯ ಜಾಲ ಧ್ವಂಸ

ಮುಂಬೈನಲ್ಲಿ ಎನ್‌ಸಿಬಿ ಮೆಗಾ ಆಪರೇಷನ್: 1,745 ಕೋಟಿ ರೂ. ಮೌಲ್ಯದ ಕೊಕೇನ್ ಜಪ್ತಿ, ಅಂತಾರಾಷ್ಟ್ರೀಯ ಜಾಲ ಧ್ವಂಸ

ಮುಂಬೈ : ಮುಂಬೈನಲ್ಲಿ ಸಕ್ರಿಯವಾಗಿದ್ದ ಬೃಹತ್ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮಾರಾಟ ಜಾಲವನ್ನು ಭೇದಿಸುವಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಯಶಸ್ವಿಯಾಗಿದ್ದು, ಸುಮಾರು 1,745 ಕೋಟಿ ರೂಪಾಯಿ ಮೌಲ್ಯದ 349 ಕಿಲೋಗ್ರಾಂ ಹೈಗ್ರೇಡ್ ಕೊಕೇನ್ ಅನ್ನು ವಶಪಡಿಸಿಕೊಂಡಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಾದಕ ಮುಕ್ತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಯಶಸ್ಸು ಎಂದು ಬಣ್ಣಿಸಿದ್ದಾರೆ. ತಳಮಟ್ಟದಿಂದ ಉನ್ನತ ಮಟ್ಟದವರೆಗೆ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ ಜಾಲವನ್ನು ಕಿತ್ತೆಸೆದ ಎನ್‌ಸಿಬಿ ತಂಡದ ಕಾರ್ಯವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

​ಈ ಕಾರ್ಯಾಚರಣೆಯು 'ಆಪರೇಷನ್ ಗ್ಲೋಬಲ್-ಹಂಟ್' ಅಡಿಯಲ್ಲಿ ನಡೆದಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಲೀಂ ಡೋಲಾನನ್ನು ಗುರುವಾರ ನವದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಬೆನ್ನಲ್ಲೇ ಈ ಬೃಹತ್ ಜಪ್ತಿ ನಡೆದಿದೆ. ಟರ್ಕಿಯಿಂದ ಭಾರತಕ್ಕೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಸಲೀಂ ನೀಡಿದ ಮಾಹಿತಿಯ ಆಧಾರದ ಮೇಲೆ ಎನ್‌ಸಿಬಿ ಈ ದಾಳಿ ನಡೆಸಿದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ನಾಗ್ಪುರದಲ್ಲಿಯೂ ಪೊಲೀಸರು ಕಾರ್ಯಾಚರಣೆ ನಡೆಸಿ, 1.7 ಲಕ್ಷ ರೂ. ಮೌಲ್ಯದ ಎಲ್‌ಎಸ್‌ಡಿ (LSD) ಎಂಬ ಅಪಾಯಕಾರಿ ಪಾರ್ಟಿ ಡ್ರಗ್ಸ್ ಹೊಂದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಸತತವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಗಳು ದೇಶಾದ್ಯಂತ ಹರಡಿರುವ ಡ್ರಗ್ಸ್ ಮಾಫಿಯಾಗೆ ದೊಡ್ಡ ಪೆಟ್ಟು ನೀಡಿವೆ.

Category
ಕರಾವಳಿ ತರಂಗಿಣಿ