image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಕಾರಾಗೃಹದಲ್ಲಿ ಹೈಡ್ರಾಮಾ: ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಕೈದಿ!

ಮಂಗಳೂರು ಕಾರಾಗೃಹದಲ್ಲಿ ಹೈಡ್ರಾಮಾ: ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಕೈದಿ!

ಮಂಗಳೂರು : ಅತೀ ಹೆಚ್ಚು ಭದ್ರತೆ ಹಾಗೂ ಕಟ್ಟುನಿಟ್ಟಿನ ತಪಾಸಣೆಗೆ ಹೆಸರಾದ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸಿನಿಮೀಯ ಮಾದರಿಯ ಹೈಡ್ರಾಮಾವೊಂದು ನಡೆದಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಲು ಕೈದಿಯೊಬ್ಬ ಮಾಡಿದ್ದ ಅತೀ ಬುದ್ಧಿವಂತಿಕೆಯ ಸ್ಕೆಚ್ ಈಗ ಆತನನ್ನೇ ಅಡಕತ್ತರಿಯಲ್ಲಿ ಸಿಲುಕಿಸಿದೆ. ಆಸ್ಪತ್ರೆಯಿಂದ ಚಿಕಿತ್ಸೆ ಮುಗಿಸಿ ಹಿಂದಿರುಗುವಾಗ ಮೊಬೈಲ್ ಫೋನನ್ನು ತನ್ನ ಗುದದ್ವಾರದೊಳಗೆ ಬಚ್ಚಿಟ್ಟು ತರಲು ಪ್ರಯತ್ನಿಸಿದ ಆರೋಪಿ ಮೊಹಮ್ಮದ್ ತೋಹಿದ್ ಎಂಬಾತನ ಕೃತ್ಯ ಕೇಳಿ ಇಡೀ ಪೊಲೀಸ್ ಇಲಾಖೆಯೇ ದಂಗಾಗಿದೆ.

​ಘಟನೆಯ ವಿವರ ಹೀಗಿದೆ, ವಿಚಾರಣಾಧೀನ ಕೈದಿಯಾಗಿದ್ದ ಮೊಹಮ್ಮದ್ ತೋಹಿದ್ ಏಪ್ರಿಲ್ 24ರಂದು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ ಜೈಲಿನ ಹೊರಗಿನ ಸಂಪರ್ಕ ಸಾಧಿಸಲು ಹೊಂಚು ಹಾಕಿದ್ದ ಈತ, ಕಾರಾಗೃಹಕ್ಕೆ ಮರಳುವಾಗ ಹೇಗಾದರೂ ಮಾಡಿ ಮೊಬೈಲ್ ಒಯ್ಯಲೇಬೇಕೆಂದು ನಿರ್ಧರಿಸಿದ್ದ. ಇದಕ್ಕಾಗಿ ಆತ ಆರಿಸಿಕೊಂಡ ದಾರಿ ಅತ್ಯಂತ ಅಪಾಯಕಾರಿ ಹಾಗೂ ಅಸಹ್ಯಕರವಾಗಿತ್ತು. ಒಂದು ಸಣ್ಣ ಕೀ-ಪ್ಯಾಡ್ ಮೊಬೈಲನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿರುವ ಆತ, ಯಾರಿಗೂ ತಿಳಿಯದಂತೆ ಅದನ್ನು ತನ್ನ ಗುದದ್ವಾರದೊಳಗೆ ತುರುಕಿಕೊಂಡಿದ್ದ.

​ಏಪ್ರಿಲ್ 29ರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತೋಹಿದ್‌ನನ್ನು ಭದ್ರತಾ ಸಿಬ್ಬಂದಿ ಜೈಲಿನ ಮುಖ್ಯದ್ವಾರಕ್ಕೆ ಕರೆತಂದಿದ್ದರು. ಜೈಲಿನೊಳಗೆ ಪ್ರವೇಶಿಸುವ ಪ್ರತಿಯೊಬ್ಬರನ್ನೂ ಕೆಎಸ್ ಐಎಸ್‌ಎಫ್ (KSISF) ಸಿಬ್ಬಂದಿ ಕೂಲಂಕಷವಾಗಿ ತಪಾಸಣೆ ಮಾಡುವುದು ವಾಡಿಕೆ. ಅದರಂತೆ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸುತ್ತಿದ್ದಾಗ, ಸಿಬ್ಬಂದಿಗೆ ಅಚ್ಚರಿಯೊಂದು ಕಾದಿತ್ತು. ತೋಹಿದ್‌ನ ದೇಹದ ಕೆಳಭಾಗಕ್ಕೆ ಡಿಟೆಕ್ಟರ್ ಹಿಡಿದಾಗ ಯಂತ್ರವು ಜೋರಾಗಿ 'ಬೀಪ್' ಸೌಂಡ್ ಮಾಡಲು ಶುರು ಮಾಡಿತು. ಮೊದಮೊದಲು ಸಿಬ್ಬಂದಿಗೆ ಗೊಂದಲವಾದರೂ, ಪದೇ ಪದೇ ಶಬ್ದ ಬರುತ್ತಿದ್ದರಿಂದ ಅನುಮಾನ ಬಲವಾಯಿತು. ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತೋಹಿದ್ ತತ್ತರಿಸಿ ಹೋಗಿ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.

​ಕೈದಿಯ ಮಾತು ಕೇಳಿ ಹೌಹಾರಿದ ಜೈಲು ಅಧಿಕಾರಿಗಳು ಕೂಡಲೇ ಆತನನ್ನು ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ವಿಶೇಷ ಕಾರ್ಯಾಚರಣೆ ನಡೆಸಿ, ಆತನ ದೇಹದೊಳಗಿದ್ದ ಮೊಬೈಲ್ ಫೋನನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಮೊಬೈಲ್‌ನಿಂದ ಆತನ ಆರೋಗ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಪ್ರಕರಣ ದಾಖಲಾಗಿದ್ದು, ಜೈಲಿನೊಳಗೆ ಕಾನೂನುಬಾಹಿರ ಚಟುವಟಿಕೆ ನಡೆಸಲು ಯತ್ನಿಸಿದ ಆರೋಪಿಯ ವಿರುದ್ಧ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ಘಟನೆಯು ಜೈಲು ಭದ್ರತೆಯ ಸವಾಲುಗಳನ್ನು ಎತ್ತಿ ತೋರಿಸಿದ್ದು, ಅಧಿಕಾರಿಗಳು ತಪಾಸಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

Category
ಕರಾವಳಿ ತರಂಗಿಣಿ