ಮಂಗಳೂರು: ಕಳೆದ ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಿಹಾರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರದ ಬೇಗುಸಾರೈ ನಿವಾಸಿ ಟುಣ್ ಟುಣ್ ಕುಮಾರ್ (31) ಬಂಧಿತ ಆರೋಪಿ. ಈತ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 68/2018, ಐಪಿಸಿ ಕಲಂ 399, 402 ಹಾಗೂ ಆರ್ಮ್ಸ್ ಆಕ್ಟ್ ಕಲಂ 25ರ ಅಡಿಯಲ್ಲಿ ದಾಖಲಾಗಿದ್ದ ದರೋಡೆ ಸಂಚು ಪ್ರಕರಣದ ಪ್ರಮುಖ ಆರೋಪಿಯಾಗಿದ್ದನು. ಪ್ರಕರಣ ದಾಖಲಾದ ಬಳಿಕ ಕಳೆದ ಏಳು ವರ್ಷಗಳಿಂದ ಈತ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದನು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಪ್ರವೃತ್ತರಾದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಚ್.ಸಿ 396 ಮಧು ಕೆ.ಎನ್, ಪಿ.ಸಿ 1968 ಅಸ್ತಮ್ ಆರ್ ಮತ್ತು ಪಿ.ಸಿ 2445 ನಾಗೇಶ ಕೆ.ಸಿ ಅವರನ್ನೊಳಗೊಂಡ ತಂಡವು ಬಿಹಾರಕ್ಕೆ ತೆರಳಿ ಆರೋಪಿಯನ್ನು ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಯನ್ನು ಏಪ್ರಿಲ್ 25, 2026ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಹೊರ ರಾಜ್ಯದಲ್ಲಿ ಅಡಗಿದ್ದ ಆರೋಪಿಯನ್ನು ಪತ್ತೆಹಚ್ಚಿದ ಪುತ್ತೂರು ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.