ಮಂಗಳೂರು: ವೈವಾಹಿಕ ಸಮಸ್ಯೆಯಿಂದ ಪತ್ನಿ ದೂರವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತಲವಾರ್ ಹಿಡಿದು ಹಲ್ಲೆಗೆ ಮುಂದಾದ ಘಟನೆ ಕಲಾವರಿನಲ್ಲಿ ನಡೆದಿದೆ. ವಾಮಂಜೂರು ನಿವಾಸಿ ನವೀನ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ನವೀನ್ ಅವರ ಪತ್ನಿ ಕೌಟುಂಬಿಕ ಕಲಹದ ಕಾರಣದಿಂದ ವಿಚ್ಛೇದನ ಪಡೆದು ಕಳೆದ ಕೆಲವು ತಿಂಗಳುಗಳಿಂದ ಜೋಕಟ್ಟೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೇ ವಿಚಾರವಾಗಿ ದ್ವೇಷ ಹೊಂದಿದ್ದ ನವೀನ್, ನಿನ್ನೆ ರಾತ್ರಿ ತಲವಾರ್ ಹಿಡಿದುಕೊಂಡು ಕಲಾವರು ನಿವಾಸಿ ದೇವಿ ಪ್ರಸಾದ್ ಎಂಬುವವರ ಮನೆಗೆ ನುಗ್ಗಿ, ದೇವಿ ಪ್ರಸಾದ್ ಹಾಗೂ ಅವರ ಪೋಷಕರ ಮೇಲೆ ಪ್ರಾಣಾಪಾಯಕಾರಿಯಾಗಿ ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ಈ ವೇಳೆ ಸಮಯಪ್ರಜ್ಞೆ ಮೆರೆದ ದೇವಿ ಪ್ರಸಾದ್ ತಕ್ಷಣವೇ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ಬರುತ್ತಿದ್ದಂತೆಯೇ ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ ನವೀನ್, ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ದೇವಿ ಪ್ರಸಾದ್ ನೀಡಿದ ದೂರಿನನ್ವಯ ಪೊಲೀಸರು ನವೀನ್ ವಿರುದ್ಧ ಕೊಲೆ ಯತ್ನ (ಸೆಕ್ಷನ್ 307) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.