ಪುತ್ತೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬನ ಮೇಲೆ ಏಳು ಮಂದಿಯ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಘಟನೆ ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಬೆಳ್ತಂಗಡಿ ನಿವಾಸಿ, ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ಆದಿಲ್ ಹುಸೈನ್ (21) ಹಲ್ಲೆಗೊಳಗಾದವರು. ದಿನಾಂಕ 22-04-2026ರಂದು ಸಂಜೆ ಆದಿಲ್ ತನ್ನ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಅವರೊಂದಿಗೆ ಚಹಾ ಕುಡಿಯುತ್ತಿದ್ದಾಗ, ಪರಿಚಯದವರೇ ಆದ ಬಿ.ಕೆ. ಮೊಯಿನುದ್ದೀನ್, ಮೋಹದ್ ಹಾಗೂ ಇತರ ಐವರು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯನ್ನು ಪ್ರಶ್ನಿಸಿದ ಸ್ನೇಹಿತರಿಗೂ ಆರೋಪಿಗಳು ಬೆದರಿಕೆ ಹಾಕಿದ್ದು, ಸಾರ್ವಜನಿಕರು ಮಧ್ಯಪ್ರವೇಶಿಸಿದಾಗ ಅವಾಚ್ಯವಾಗಿ ಬೈದು ಸ್ಥಳದಿಂದ ಪರಾರಿಯಾಗಿದ್ದಾರೆ.
ಕೆಲವು ತಿಂಗಳ ಹಿಂದೆ ಕಾಲೇಜು ವಿದ್ಯಾರ್ಥಿಗಳ ನಡುವಿನ ಗಲಾಟೆಯನ್ನು ಆದಿಲ್ ಬಿಡಿಸಿದ್ದರು ಎಂಬ ಕಾರಣಕ್ಕೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವಿದ್ಯಾರ್ಥಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.