image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಕಲಿ ತೆರಿಗೆ ರಸೀದಿ ಜಾಲ ಪತ್ತೆ: ಕೋಟ್ಯಂತರ ರೂ. ಜಿಎಸ್‌ಟಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ನಕಲಿ ತೆರಿಗೆ ರಸೀದಿ ಜಾಲ ಪತ್ತೆ: ಕೋಟ್ಯಂತರ ರೂ. ಜಿಎಸ್‌ಟಿ ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ಬೆಂಗಳೂರು: ಕರ್ನಾಟಕ ಸೇರಿದಂತೆ ನೆರೆರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ನಕಲಿ ತೆರಿಗೆ ರಸೀದಿಗಳನ್ನು ಸೃಷ್ಟಿಸಿ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವನ್ನು ದಕ್ಷಿಣ ವಲಯದ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಅಕ್ರಮ ಜಾಲದ ಪ್ರಮುಖ ಸೂತ್ರಧಾರಿ ಎನ್ನಲಾದ ತೌಕೀರ್ ಅಲಿಯಾಸ್ ಮೊಹಮ್ಮದ್ (42) ಎಂಬಾತನನ್ನು ಬಂಧಿಸಲಾಗಿದ್ದು, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

​ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ಆರೋಪಿಗಳು ಸುಮಾರು 410 ಕೋಟಿ ರೂ.ಗಳ ಬೃಹತ್ ವಂಚನೆ ಎಸಗಿದ್ದು, ಇದರಲ್ಲಿ ಅಂದಾಜು 102.5 ಕೋಟಿ ರೂ.ಗಳಷ್ಟು ನಕಲಿ ಹೂಡುವಳಿ ತೆರಿಗೆ (ITC) ಒಳಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ಅತ್ಯಂತ ವ್ಯವಸ್ಥಿತವಾಗಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದರು. ಖೊಟ್ಟಿ ವಿಳಾಸಗಳನ್ನು ನೀಡಿ ಬಾಡಿಗೆ ಅಥವಾ ಭೋಗ್ಯದ ಕರಾರು ಪತ್ರಗಳನ್ನು ಸೃಷ್ಟಿಸಿ, ಅವುಗಳ ಮೂಲಕ ಜಿಎಸ್‌ಟಿ ನೋಂದಣಿ ಪಡೆದುಕೊಳ್ಳುತ್ತಿದ್ದರು. ಈ ಪ್ರಕ್ರಿಯೆಗೆ ಬೇರೆ ವ್ಯಕ್ತಿಗಳ ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು.

​ಒಮ್ಮೆ ಜಿಎಸ್‌ಟಿ ನೋಂದಣಿ ದೊರೆತ ನಂತರ, ಯಾವುದೇ ವಸ್ತುಗಳ ಸರಬರಾಜು ಮಾಡದೆಯೇ ಕೇವಲ ಕಾಗದದ ಮೇಲೆ ಸಿಮೆಂಟ್, ಕಬ್ಬಿಣದ ಸರಳು, ಝಿಂಕ್ ಶೀಟ್ ಮತ್ತು ಪೈಪ್‌ಗಳಂತಹ ಸಾಮಗ್ರಿಗಳನ್ನು ಖರೀದಿ ಮಾಡಿದಂತೆ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸುತ್ತಿದ್ದರು. ಈ ಬಿಲ್‌ಗಳನ್ನು ವಿವಿಧ ಗುತ್ತಿಗೆದಾರರಿಗೆ ಮತ್ತು ವ್ಯಾಪಾರಿಗಳಿಗೆ ಮಾರಾಟ ಮಾಡುವ ಮೂಲಕ ಅಕ್ರಮವಾಗಿ ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್ ಪಡೆದು ವಂಚನೆ ಮಾಡುತ್ತಿದ್ದರು. ಅಧಿಕಾರಿಗಳಿಗೆ ಅನುಮಾನ ಬಂದು ನೋಟಿಸ್ ನೀಡುತ್ತಿದ್ದಂತೆಯೇ ಆ ಹಳೆಯ ಕಂಪನಿಗಳನ್ನು ರದ್ದುಗೊಳಿಸಿ, ಮತ್ತೆ ಹೊಸ ಹೆಸರಿನಲ್ಲಿ ಕಂಪನಿಗಳನ್ನು ಆರಂಭಿಸಿ ವಂಚನೆ ಮುಂದುವರಿಸುತ್ತಿದ್ದರು ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಜಾಲದಲ್ಲಿ ಭಾಗಿಯಾಗಿರುವ ಇತರೆ ಆರೋಪಿಗಳ ಪತ್ತೆಗಾಗಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.

Category
ಕರಾವಳಿ ತರಂಗಿಣಿ