ಮಂಗಳೂರು:ತಣ್ಣೀರುಬಾವಿ ಬೀಚ್ ಸಮೀಪ ನಡೆದಿದ್ದ ಪ್ರವಾಸಿಗರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸೇರಿ ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿಯ ಸೋಮವಾರಪೇಟೆ ನಿವಾಸಿ ಅಜಯ್ ಕೆ. ಎಂಬವರು ಏಪ್ರಿಲ್ 13ರಂದು ಬೆಳಗಿನ ಜಾವ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಲು ತಣ್ಣೀರುಬಾವಿ ಬೀಚ್‌ಗೆ ಬಂದಿದ್ದಾಗ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆಗೆ ಹೋಗಿದ್ದರು. ಈ ವೇಳೆ ವಿಳಾಸ ಕೇಳುವ ನೆಪದಲ್ಲಿ ಕಾರು ನಿಲ್ಲಿಸಿದಾಗ, ಕಾರಿನೊಳಗೆ ನುಗ್ಗಿದ ಇಬ್ಬರು ಯುವಕರು ಸ್ಕ್ರೂ ಡ್ರೈವರ್‌ನಿಂದ ಚುಚ್ಚುವುದಾಗಿ ಬೆದರಿಸಿ ಸುಮಾರು 24,500 ರೂ. ಮೌಲ್ಯದ ವಾಚ್‌ಗಳು, ಗಿಂಬಲ್, ಪವರ್ ಬ್ಯಾಂಕ್ ಮತ್ತು ನಗದನ್ನು ದೋಚಿದ್ದರು. ಅಲ್ಲದೆ ಕಾರಿನ ಗಾಜನ್ನು ಪುಡಿ ಮಾಡಿ 8,000 ರೂ. ಹಾನಿ ಎಸಗಿದ್ದರು. ಸುಲಿಗೆ ಮಾಡಿದ ಸೊತ್ತುಗಳೊಂದಿಗೆ ಆರೋಪಿಗಳು ತಮ್ಮ ಸ್ನೇಹಿತನ ಬೈಕ್‌ನಲ್ಲಿ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಪಣಂಬೂರು ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದ ತಂಡ, ಘಟನೆ ನಡೆದ ದಿನವೇ ಕಾರ್ಯಾಚರಣೆ ನಡೆಸಿ ಕಸಬಾ ಬೆಂಗ್ರೆ ನಿವಾಸಿಗಳಾದ ಮೊಹಮ್ಮದ್ ಸಿನಾನ್ (24) ಮತ್ತು ಝಹೀರ್ ನಿಸಾರ್ (22) ಎಂಬವರನ್ನು ಬಂಧಿಸಿತ್ತು. ಆದರೆ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಚಂದು ಹಾರೀಸ್ (33) ತಲೆಮರೆಸಿಕೊಂಡಿದ್ದನು. ಪೊಲೀಸರು ಈತನ ಬೆನ್ನತ್ತಿ ಏಪ್ರಿಲ್ 22ರಂದು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸ್ಮಾರ್ಟ್ ವಾಚ್, ಪವರ್ ಬ್ಯಾಂಕ್ ಹಾಗೂ ಕೃತ್ಯಕ್ಕೆ ಬಳಸಿದ ಟಿವಿಎಸ್ ಅಪಾಚೆ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಚಂದು ಹಾರೀಸ್ ರೌಡಿ ಶೀಟರ್ ಆಗಿದ್ದು,
ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪಣಂಬೂರು ಠಾಣೆಯಲ್ಲಿ ಈತನ ಹೆಸರಿನಲ್ಲಿ ರೌಡಿ ಪಟ್ಟಿ (Rowdy Sheet) ತೆರೆಯಲಾಗಿದ್ದು, ಈ ಹಿಂದೆ ನ್ಯಾಯಾಲಯದಿಂದ ಮೂರು ವಾರೆಂಟ್‌ಗಳು ಕೂಡ ಜಾರಿಯಾಗಿದ್ದವು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಿ.ಎಸ್.ಐಗಳಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.