ಮಂಗಳೂರು: ಖಾಸಗಿ ವಾಹಿನಿಯೊಂದರ 'ಯಕ್ಷ ತಿಳಿಕೆ' ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ 'ಬುರುಡೆ ಗ್ಯಾಂಗ್' ಎಂಬ ಪ್ರಹಸನದ ವಿಚಾರವಾಗಿ, ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಯಕ್ಷಗಾನ ಹಾಸ್ಯ ಕಲಾವಿದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಕಲಾವಿದರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಯಕ್ಷಗಾನ ಕಲಾವಿದರಾದ ಸುಂದರ್ ರೈ ಮಂದಾರ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ದಿನೇಶ್ ಶೆಟ್ಟಿ ಕೊಡೆಪದವು ಹಾಗೂ ಭಾಗವತ ಧೀರಜ್ ರೈ ಸಂಪಾಜೆ ಅವರು ಜಂಟಿಯಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಬುರುಡೆ ಗ್ಯಾಂಗ್' ಎಂಬ ಪ್ರಹಸನವು ತಮ್ಮನ್ನು ಉದ್ದೇಶಿಸಿ ಮಾಡಿದ್ದೀರಿ ಎಂದು ಆಕ್ರೋಶಗೊಂಡ ಮಹೇಶ್ ಶೆಟ್ಟಿ ಅವರು, ಕಲಾವಿದ ಪ್ರಜ್ವಲ್ ಕುಮಾರ್ ಅವರಿಗೆ ಕರೆ ಮಾಡಿ ಸುಂದರ್ ರೈ ಮಂದಾರ ಮತ್ತು ದಿನೇಶ್ ಶೆಟ್ಟಿ ಅವರನ್ನು ತೀವ್ರವಾಗಿ ನಿಂದಿಸಿದ್ದಾರೆ ಎಂದು ಕಲಾವಿದರು ತಿಳಿಸಿದ್ದಾರೆ.
ಕಲಾವಿದರ ಪತ್ನಿ ಮತ್ತು ತಾಯಿಯ ಬಗ್ಗೆಯೂ ಅಶ್ಲೀಲ ಪದಬಳಕೆ ಮಾಡಲಾಗಿದ್ದು, ಆಡಿಯೋದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಸಭ್ಯವಾಗಿ ಉಲ್ಲೇಖಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ, ಜಾತಿ ಮತ್ತು ಧರ್ಮದ ಬಗ್ಗೆ ಕೆಟ್ಟ ಪದಗಳನ್ನು ಬಳಸಲಾಗಿದೆ ಎಂದು ಹೇಳಿರುವ ಕಲಾವಿದರು, ಈ ಸಂಬಂಧ ಬೆಳ್ತಂಗಡಿ ಹಾಗೂ ಪುತ್ತೂರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಮಾಧ್ಯಮದ ಮುಂದೆ ಮಾತನಾಡಿದ ಕಲಾವಿದರು, ತಾವು ಯಾವುದೇ ವ್ಯಕ್ತಿ ಅಥವಾ ತಂಡದ ಅವಹೇಳನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.