image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಲಿತ ಮಹಿಳೆ ಮೇಲೆ ಹಲ್ಲೆ, ಜಾತಿನಿಂದನೆ: ಕಡಬದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ದಲಿತ ಮಹಿಳೆ ಮೇಲೆ ಹಲ್ಲೆ, ಜಾತಿನಿಂದನೆ: ಕಡಬದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಕಡಬ: ರಸ್ತೆ ಹಾನಿಯಾಗುತ್ತಿರುವುದನ್ನು ಪ್ರಶ್ನಿಸಿದ ದಲಿತ ಮಹಿಳೆಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿಯಲ್ಲಿ ನಡೆದಿದೆ.

ಕುಟ್ರುಪ್ಪಾಡಿ ನಿವಾಸಿ ಮೋನಮ್ಮ (55) ಎಂಬವರು ನೀಡಿದ ದೂರಿನ ಮೇರೆಗೆ ರುಕ್ಮಯ್ಯ, ನೊಣಯ್ಯ, ಬಾಲಕೃಷ್ಣ ಹಾಗೂ ಹರಿಪ್ರಸಾದ್ ಎಂಬವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 08-04-2026 ರಂದು ಮೋನಮ್ಮ ಅವರು ತಾವು ಕೆಲಸ ಮಾಡುತ್ತಿದ್ದ ಮಾಲಿಕರ ಮನೆಯಲ್ಲಿದ್ದಾಗ, ಮನೆಗೆ ಬರುವ ರಸ್ತೆಯಲ್ಲಿ ಜೆಸಿಬಿ ಮೂಲಕ ಕೆಲಸ ನಡೆಯುತ್ತಿತ್ತು. ಇದರಿಂದ ರಸ್ತೆಗೆ ಹಾನಿಯಾಗುತ್ತಿರುವುದನ್ನು ಗಮನಿಸಿದ ಅವರು ಸ್ಥಳಕ್ಕೆ ತೆರಳಿ, "ಜಾಗದ ಮಾಲಿಕರ ಉಪಸ್ಥಿತಿಯಲ್ಲಿ ಕೆಲಸ ನಡೆಸಿ, ರಸ್ತೆ ಹಾಳು ಮಾಡಬೇಡಿ" ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಆರೋಪಿಗಳು ಏಕಾಏಕಿ ಮೋನಮ್ಮ ಅವರ ವಿರುದ್ಧ ಕೆರಳಿದ್ದು, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಜಾತಿ ಹಿಡಿದು ಅವಮಾನಿಸಿದ್ದಾರೆ. ಅಲ್ಲದೆ, ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಅ.ಕ್ರ: 44/2026 ರಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ 2015 ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Category
ಕರಾವಳಿ ತರಂಗಿಣಿ