ಸುಳ್ಯ:ಸಾಲವಾಗಿ ಪಡೆದಿದ್ದ ಹಣವನ್ನು ಹಿಂತಿರುಗಿಸುವ ನೆಪದಲ್ಲಿ ಮನೆಗೆ ಬಂದು, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಸುಳ್ಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಶೃತಿ @ ವಿಶ್ಮೀತ (37) ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ಪೊಲೀಸರು ಬಂಧಿಸಿ, ಕಳವಾದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ ಎಂಬವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪುಣ್ಯಶ್ರೀ ಅವರ ತಂದೆಯು ಆರೋಪಿತೆ ಶೃತಿ ಎಂಬಾಕೆಗೆ ಆರು ಲಕ್ಷ ರೂಪಾಯಿಗಳನ್ನು ಸಾಲವಾಗಿ ನೀಡಿದ್ದರು. ಈ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಹಣ ನೀಡುವುದಾಗಿ ಒಪ್ಪಿಕೊಂಡ ಶೃತಿ ಏಪ್ರಿಲ್ 7 ರಂದು ಪುಣ್ಯಶ್ರೀ ಅವರ ಮನೆಗೆ ಬಂದಿದ್ದಳು. ಆ ಸಮಯದಲ್ಲಿ ಮನೆಯವರು ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.
ರಾತ್ರಿ ಪುಣ್ಯಶ್ರೀ ಅವರು ಮನೆಗೆ ಬಂದು ನೋಡಿದಾಗ ಕಪಾಟಿನ ಬೀಗದ ಕೀ ಕೆಳಗೆ ಬಿದ್ದಿರುವುದು ಕಂಡುಬಂದಿದೆ. ಸಂಶಯಗೊಂಡು ಕಪಾಟನ್ನು ಪರಿಶೀಲಿಸಿದಾಗ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ 62 ½ ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಮನೆಗೆ ಬಂದಿದ್ದ ಶೃತಿ ಅವರೇ ಎಸಗಿದ್ದಾರೆಂದು ನೀಡಲಾದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಶೃತಿ ಹಾಗೂ ಆಕೆಗೆ ಸಾಥ್ ನೀಡಿದ್ದ ಪ್ರದೀಪ್‌ನನ್ನು ಬಂಧಿಸಿ, ಕಳವು ಮಾಡಿದ್ದ ಸಂಪೂರ್ಣ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.