ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಗ್ರಾಮದ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡು ಮೂಲದ ಅಂತರ್ ರಾಜ್ಯ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದಿಂಡಿಗುಲ್ ಜಿಲ್ಲೆಯ ಶಬಿಕ್ ಅಹಮ್ಮದ್ ಶೇಖ್ ಅಬ್ದುಲ್ ಖಾದರ್ (25) ಎಂದು ಗುರುತಿಸಲಾಗಿದೆ.
ಕಳೆದ ಮಾರ್ಚ್ 03, 2026 ರಂದು ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿದ ಆರೋಪಿ, ದೇವಸ್ಥಾನದಲ್ಲಿದ್ದ ಮೂರು ಕಾಣಿಕೆ ಹುಂಡಿಗಳನ್ನು ಒಡೆದು ಸುಮಾರು 25,000 ರೂಪಾಯಿ ನಗದನ್ನು ದೋಚಿದ್ದನು. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿದ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಮಾರ್ಚ್ 31 ರಂದು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದು, ಕಳವಾಗಿದ್ದ ಹುಂಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನಿಖೆಯ ವೇಳೆ ಈತ ಕೇವಲ ಕೆಂಜಾರು ದೇವಸ್ಥಾನವಷ್ಟೇ ಅಲ್ಲದೆ, ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆಯ ಕಳವು ಪ್ರಕರಣ ಮತ್ತು ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಕೂರು-ಜೊಕಟ್ಟೆ ಪ್ರದೇಶದಲ್ಲಿ ಮೋಟಾರ್ ಸೈಕಲ್ ಕಳವು ಪ್ರಕರಣದಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈತ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕಳ್ಳತನ ಎಸಗಿ, ಪುನಃ ತಮಿಳುನಾಡಿಗೆ ಪರಾರಿಯಾಗುವ ಚಾಳಿ ಹೊಂದಿದ್ದನು. ಬಜಪೆ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಮತ್ತು ಸಿಬ್ಬಂದಿಗಳಾದ ನೂತನ್, ರಾಜೇಶ್ ಹಾಗೂ ಪ್ರಕಾಶ್ ಅವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.