ಉಳ್ಳಾಲ: ಪಂಚಾಯತ್ ನಿರ್ಮಿಸಿದ್ದ ಮಳೆನೀರಿನ ತೋಡನ್ನು ಮುಚ್ಚಿದ ಕೃತ್ಯವನ್ನು ಪ್ರಶ್ನಿಸಿದ ನೆರೆಮನೆಯವರ ಮೇಲೆ ವ್ಯಕ್ತಿಯೊಬ್ಬ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರಿನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಈ ಸಂಬಂಧ ಆರೋಪಿ ನಾಗೇಶ್ ಶೇಣವ ಎಂಬಾತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 29ರಂದು ಬೆಳಿಗ್ಗೆ 8.30ರ ಸುಮಾರಿಗೆ, ನಾಗೇಶ್ ಶೇಣವ ತನ್ನ ಅಂಗಳದ ಮೂಲಕ ಹಾದುಹೋಗುತ್ತಿದ್ದ ಪಂಚಾಯತ್ ನಿರ್ಮಿತ ಮಳೆನೀರಿನ ತೋಡಿನ ಛೇಂಬರನ್ನು ಅಗೆದು, ಇಟ್ಟಿಗೆಯಿಂದ ಸಂಪೂರ್ಣವಾಗಿ ಮುಚ್ಚಿದ್ದು, ಇದನ್ನು ನೆರೆಮನೆಯ ರವಿರಾಜ್ ಪ್ರಶ್ನಿಸಿದಾಗ, ಆತ ರವಿರಾಜ್ ಅವರ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ರವಿರಾಜ್ ಅವರ ತಾಯಿ ಬೇಬಿ (56) ಅವರ ಕಾಲಿಗೆ ಕಲ್ಲನ್ನು ಎಸೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಅಲ್ಲದೆ, ಪ್ರಶ್ನಿಸಿದ ಬೇಬಿ ಅವರ ಸೊಸೆ ವರ್ಷಾ ಅವರ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಐಪಿಸಿ ಬದಲು ಹೊಸ ಕಾನೂನಿನ ಅನ್ವಯ (BNS) ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.