ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮತ್ತು ಸುಳ್ಯ ಭಾಗದಲ್ಲಿ ಹಲವು ಘೋರ ಅಪರಾಧಗಳಲ್ಲಿ ಭಾಗಿಯಾಗಿ, ಕಳೆದ ಎಂಟು ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಕುಖ್ಯಾತ ಆರೋಪಿ ಎನ್. ಎಂ. ಅಜೀಜ್ ಎಂಬಾತನನ್ನು ಕೊನೆಗೂ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುಳ್ಯ ತಾಲೂಕಿನ ಅಜ್ಜಾವರ ನಿವಾಸಿಯಾದ ಈತನಿಗೆ ಕಡಬ ಪೊಲೀಸ್ ಠಾಣೆಯ ಕೊಲೆ ಪ್ರಕರಣವೊಂದರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಹತ್ತು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಆದರೆ, 2018ರಲ್ಲಿ ಕೇರಳ ಪೊಲೀಸರು ಈತನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಈತ ಪರಾರಿಯಾಗಿದ್ದನು. ಅಂದಿನಿಂದ ತಲೆಮರೆಸಿಕೊಂಡಿದ್ದ ಅಜೀಜ್, ತನ್ನ ಗುರುತನ್ನು ಮರೆಮಾಚಲು ಕಲಬುರಗಿ ಜಿಲ್ಲೆಯ ಜೇವರ್ಗಿ ನಿವಾಸಿ 'ಬಸವರಾಜು' ಎಂಬ ಹೆಸರಿನಲ್ಲಿ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದನು.
ಪೊಲೀಸರ ನಿರಂತರ ತನಿಖೆ ಮತ್ತು ಜಾಲದ ಬೆನ್ನಟ್ಟುವಿಕೆಯ ಫಲವಾಗಿ, ಆರೋಪಿ ಅಜೀಜ್ ಸದ್ಯ ಆಂಧ್ರಪ್ರದೇಶದ ಚಿತ್ತೂರು ಜೈಲಿನಲ್ಲಿರುವುದು ದೃಢಪಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಕಡಬ ಪೊಲೀಸರು, ಸಂಬಂಧಪಟ್ಟ ನ್ಯಾಯಾಲಯದಿಂದ ಬಾಡಿ ವಾರಂಟ್ ಪಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಅಸಾಮಿಯು ಕೇವಲ ಒಂದು ಕೊಲೆ ಪ್ರಕರಣ ಮಾತ್ರವಲ್ಲದೆ, ಲಾಭಕ್ಕಾಗಿ ಮಾಡಿದ ಒಟ್ಟು ಮೂರು ಕೊಲೆ ಪ್ರಕರಣಗಳು ಹಾಗೂ ಹತ್ತಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈತನ ಪತ್ತೆಯಿಂದಾಗಿ ಕೇರಳದ ಮೂರು ಎಲ್‌ಪಿಸಿ (LPC) ಪ್ರಕರಣಗಳು, ಸುಳ್ಯ ಠಾಣೆಯ ಎರಡು ಎಲ್‌ಪಿಸಿ ಪ್ರಕರಣಗಳು ಹಾಗೂ ಕಡಬ ಠಾಣೆಯ ಒಂದು ಕನ್ವಿಕ್ಷನ್ ವಾರಂಟ್ ಪ್ರಕರಣಗಳು ಸೇರಿದಂತೆ ಒಟ್ಟು ಹಲವು ಹಳೆಯ ಪ್ರಕರಣಗಳಿಗೆ ಮರುಜೀವ ಸಿಕ್ಕಂತಾಗಿದೆ. ಸದ್ಯ ಆರೋಪಿಯನ್ನು ಹೆಚ್ಚಿನ ಕಾನೂನು ಕ್ರಮಗಳಿಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.