image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಳ್ಳತನ ಪ್ರಕರಣದ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ

ಕಳ್ಳತನ ಪ್ರಕರಣದ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ

2018ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ಪ್ರಕರಣದಲ್ಲಿ ಸುಳ್ಯದ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

​2018ರ ಮೇ 16ರ ರಾತ್ರಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ (ಅಪರಾಧ ಸಂಖ್ಯೆ: 25/2018, ಕಲಂ 379 IPC) ಸಂಬಂಧಿಸಿದಂತೆ ತುಮಕೂರು ನಿವಾಸಿ ಅಶ್ವನ್ ಗೌಡ ಜೆ. ಪಿ. ಎಂಬಾತ ಆರೋಪಿಯಾಗಿದ್ದನು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಸಾಬೀತಾದ ಬಳಿಕ, ಆತನಿಗೆ ಪ್ರೊಬೇಷನ್ ಆಫ್ ಅಫೆಂಡರ್ಸ್ (PO Act) ಕಾಯ್ದೆಯಡಿ ಬಿಡುಗಡೆ ನೀಡಲಾಗಿತ್ತು. ಆದರೆ, ಆ ಬಳಿಕ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ವಾರೆಂಟ್ ಜಾರಿಯಾಗಿತ್ತು.

​ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಮಹೇಶ್ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಕಿರಣ್ ಅವರ ತಂಡವು, ಮಾರ್ಚ್ 24, 2026ರಂದು ತುಮಕೂರಿನ ಗುಂಗೂರುಮಳೆ ಎಂಬಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

​ಬಂಧಿತ ಆರೋಪಿಯನ್ನು ಸುಳ್ಯದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶಿವಣ್ಣ ಹೆಚ್. ಆರ್. ಅವರು, ಆರೋಪಿಗೆ ಕಲಂ 380 IPC ಅಡಿಯಲ್ಲಿ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 10 ದಿನಗಳ ಸಜೆಯನ್ನು ಅನುಭವಿಸಬೇಕೆಂದು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ. ಸಿ. ಅವರು ಸಮರ್ಥವಾಗಿ ವಾದ ಮಂಡಿಸಿದ್ದಾರೆ.

Category
ಕರಾವಳಿ ತರಂಗಿಣಿ