image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಸೀದಿ ವಿಚಾರವಾಗಿ ಇತ್ತಂಡಗಳ ನಡುವೆ ಮಾರಾಮಾರಿ: ಮೂರು ಪ್ರತ್ಯೇಕ ಪ್ರಕರಣ ದಾಖಲು

ಮಸೀದಿ ವಿಚಾರವಾಗಿ ಇತ್ತಂಡಗಳ ನಡುವೆ ಮಾರಾಮಾರಿ: ಮೂರು ಪ್ರತ್ಯೇಕ ಪ್ರಕರಣ ದಾಖಲು

ಬಂಟ್ವಾಳ: ತಾಲೂಕಿನ ಸಜಿಪ ಪಡು ಗ್ರಾಮದ ತಲೆಮೊಗರು ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

​ಮಾರ್ಚ್ 22ರಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಮೊದಲ ಪ್ರಕರಣದಲ್ಲಿ ಅಬ್ದುಲ್ ನವಾಝ್ ಎಂಬವರು ದೂರು ನೀಡಿದ್ದಾರೆ. ಮಸೀದಿಯಿಂದ ವಾಪಾಸ್ ಬರುವಾಗ ಶೌಕತ್, ಇಸಾಕ್ ಸೇರಿದಂತೆ ಏಳು ಮಂದಿಯ ತಂಡ ಮಸೀದಿ ವಿಚಾರದಲ್ಲಿ ತಕರಾರು ತೆಗೆದು ಕತ್ತಿ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಬ್ದುಲ್ ಗಫೂರ್ ಎಂಬವರು ಪ್ರತಿದೂರು ನೀಡಿದ್ದು, ಯಾಕೂಬ್, ಶಫೀಕ್ ಮತ್ತಿತರರು ತನ್ನನ್ನು ತಡೆದು ನಿಲ್ಲಿಸಿ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

​ಇದೇ ಘಟನೆಗೆ ಸಂಬಂಧಿಸಿದಂತೆ ಶೌಕತ್ ಆಲಿ ಎಂಬವರು ಮತ್ತೊಂದು ದೂರು ದಾಖಲಿಸಿದ್ದು, ತಾವು ಅಂಗಡಿಯಲ್ಲಿದ್ದಾಗ ದಾವೂದ್, ಜುಬೈರ್ ಸೇರಿದಂತೆ ಏಳು ಮಂದಿಯ ತಂಡ ಅಂಗಡಿಗೆ ನುಗ್ಗಿ ತನ್ನ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ತಲವಾರಿನಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಬಿಎನ್‌ಎಸ್ ಕಾಯ್ದೆ ಹಾಗೂ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಗಾಯಾಳುಗಳು ಚಿಕಿತ್ಸೆ ಪಡೆದು ಬಿಡುಗಡೆಗೊಂಡ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ