ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ AI ತಂತ್ರಜ್ಞಾನ ಬಳಸಿ ತಿರುಚಿದ ವಿಡಿಯೋವನ್ನು ಹಂಚಿಕೊಂಡು ಸಮಾಜದಲ್ಲಿ ಕೋಮು ದ್ವೇಷವನ್ನು ಹುಟ್ಟುಹಾಕಲು ಯತ್ನಿಸಿದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ನಿವಾಸಿ, 38 ವರ್ಷದ ಮಹಮ್ಮದ್ ರಫೀಕ್ ಬಂಧಿತ ಆರೋಪಿ. ಈತ "ನಝೀರ ಮಂಗಳೂರು" ಎಂಬ ಫೇಸ್‌ಬುಕ್ ಖಾತೆಯನ್ನು ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. 2025ರ ಅಕ್ಟೋಬರ್‌ನಲ್ಲಿ ಈತ AI ತಂತ್ರಾಂಶದ ಮೂಲಕ ವಿಡಿಯೋವನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಆರೋಪಿಯು ಬೆಂಗಳೂರಿನಲ್ಲಿ ಅಡಗಿರುವ ಸುಳಿವು ಪಡೆದು ಮಾರ್ಚ್ 22ರಂದು ಆತನನ್ನು ದಸ್ತಗಿರಿ ಮಾಡಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.