image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅನ್ಯಧರ್ಮದ ವಿದ್ಯಾರ್ಥಿಗಳ ಜೊತೆ ಜಾತ್ರೆಗೆ ಬಂದಿದ್ದಕ್ಕೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ: ಪ್ರಕರಣ ದಾಖಲು

ಅನ್ಯಧರ್ಮದ ವಿದ್ಯಾರ್ಥಿಗಳ ಜೊತೆ ಜಾತ್ರೆಗೆ ಬಂದಿದ್ದಕ್ಕೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ: ಪ್ರಕರಣ ದಾಖಲು

ಬೆಳ್ತಂಗಡಿ: ತಾಲೂಕಿನ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನ್ಯಧರ್ಮದ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದ ಅಪ್ರಾಪ್ತ ಬಾಲಕನ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿ, ಬಲವಂತವಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಕಲಿಯುತ್ತಿರುವ 17 ವರ್ಷದ ಬಾಲಕನು ಮಾರ್ಚ್ 11ರಂದು ಸಂಜೆ ತನ್ನ ಶಾಲಾ ಸ್ನೇಹಿತರೊಂದಿಗೆ ಸ್ಥಳೀಯ ಜಾತ್ರೆಗೆ ತೆರಳಿದ್ದ ವೇಳೆ ಈ ಕೃತ್ಯ ನಡೆದಿದೆ.

ಜಾತ್ರಾ ಸ್ಥಳದಲ್ಲಿದ್ದ ಕೆಲವರು, ಬಾಲಕನು ತಮ್ಮ ಧರ್ಮದ ಹುಡುಗಿಯರೊಂದಿಗೆ ಬಂದಿರುವುದನ್ನು ಆಕ್ಷೇಪಿಸಿ ಮೊದಲಿಗೆ ಸ್ಥಳದಲ್ಲೇ ಹಲ್ಲೆ ನಡೆಸಿ ನಿಂದಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಕಿಡಿಗೇಡಿಗಳು, ಬಾಲಕನನ್ನು ಬೈಕಿನಲ್ಲಿ ಜನರಿಲ್ಲದ ದೂರದ ಪ್ರದೇಶಕ್ಕೆ ಕರೆದೊಯ್ದು ಮತ್ತೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಜಾತ್ರಾ ಸ್ಥಳದಲ್ಲಿ ತಾನೇ ತಪ್ಪು ಮಾಡಿರುವುದಾಗಿ ಬಾಲಕನಿಂದ ಬಲವಂತವಾಗಿ ವಿಡಿಯೋ ಹೇಳಿಕೆಯನ್ನು ಚಿತ್ರೀಕರಿಸಿಕೊಂಡು ಅಲ್ಲಿಂದ ಕಳುಹಿಸಿದ್ದಾರೆ. ಈ ಘಟನೆಯಿಂದ ತೀವ್ರ ಭಯಭೀತನಾಗಿದ್ದ ಬಾಲಕನು ವಿಷಯವನ್ನು ಮನೆಯವರಿಗೆ ತಿಳಿಸಲು ಹಿಂಜರಿದಿದ್ದ ಎನ್ನಲಾಗಿದೆ.
ಬಳಿಕ ಬಾಲಕನ ಸ್ಥಿತಿಯನ್ನು ಗಮನಿಸಿದ ತಂದೆಯು ಮಾರ್ಚ್ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಬಿಎನ್‌ಎಸ್ (BNS 2023) ಕಾಯಿದೆಯ ವಿವಿಧ ಕಲಂಗಳು ಸೇರಿದಂತೆ ಕಲಂ 137(2), 115(2), 351(2), 352, 353(2) ಮತ್ತು 190ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ