image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು: ಎಸಿಪಿ ವರದಿಯ ಬೆನ್ನಲ್ಲೇ ಕಠಿಣ ಕ್ರಮ

ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು: ಎಸಿಪಿ ವರದಿಯ ಬೆನ್ನಲ್ಲೇ ಕಠಿಣ ಕ್ರಮ

ಮಂಗಳೂರು: ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖೆ ಚಾಟಿ ಬೀಸಿದ್ದು, ಎಸಿಪಿ ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

​ಇತ್ತೀಚೆಗೆ ಇನ್ಸ್‌ಪೆಕ್ಟರ್ ವಿರುದ್ಧ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್ ಎಂಬುವವರು ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಎಸಿಪಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಮತ್ತೊಂದೆಡೆ, ಅವಿತಾ ಮಿನೇಜಸ್ ಅವರ ಪತಿ ವಿರುದ್ಧ ನಾಲ್ಕು ಪ್ರಕರಣಗಳಿದ್ದು, ಚಿಕಿತ್ಸೆಯ ಹೆಸರಿನಲ್ಲಿ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಅವಿತಾ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇನ್ಸ್‌ಪೆಕ್ಟರ್ ಲಂಚ ಕೇಳಿದ್ದಾರೆನ್ನಲಾದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಸಾಕ್ಷಿಗಳಿದ್ದರೂ, ಅಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

​ಆದರೆ, ಈ ಇಬ್ಬರು ಮಹಿಳೆಯರಿಗಿಂತ ಭಿನ್ನವಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋ ತುಣುಕುಗಳು ಇನ್ಸ್‌ಪೆಕ್ಟರ್ ಪಾಲಿಗೆ ಮುಳುವಾಗಿವೆ. ವಿಡಿಯೋದಲ್ಲಿ ಇನ್ಸ್‌ಪೆಕ್ಟರ್ ಅವರ ವರ್ತನೆ ಪ್ರಶ್ನಾರ್ಹವಾಗಿದ್ದು, ಫೋನ್‌ನಲ್ಲಿ ಮಹಿಳೆಯೊಬ್ಬರ ಜೊತೆ ಅತ್ಯಂತ ಅಸಭ್ಯವಾಗಿ ಮಾತನಾಡಿರುವುದು ಪತ್ತೆಯಾಗಿದೆ. ಈ ವಿಡಿಯೋದಲ್ಲಿರುವ ಮಹಿಳೆಯರು ದೂರು ನೀಡಲು ನಿರಾಕರಿಸಿದ್ದರೂ ಸಹ, ಲಭ್ಯವಿರುವ ಸಾಕ್ಷ್ಯಗಳು ಅಧಿಕಾರಿಯ ದುರ್ವರ್ತನೆಯನ್ನು ಎತ್ತಿ ತೋರಿಸುತ್ತಿವೆ.

​ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದ್ದು, ಈ ಬಗ್ಗೆ ಸಮಗ್ರ ಇಲಾಖಾ ವಿಚಾರಣೆಗೆ ಸೂಚಿಸಲಾಗಿದೆ.

 

Category
ಕರಾವಳಿ ತರಂಗಿಣಿ