ಸುಳ್ಯ: ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಸುಳ್ಯದ ನಿವಾಸಿಯೊಬ್ಬರಿಗೆ ಇಲ್ಲಿನ ನ್ಯಾಯಾಲಯವು ವಿಶಿಷ್ಟವಾದ ಶಿಕ್ಷೆಯನ್ನು ವಿಧಿಸಿದೆ. ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬುವವರು ನಗರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಬಿ.ಪಿ. ರವರು ಐ ಎಂ ವಿ ಆಕ್ಟ್ (IMV Act) ಅಡಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಸುಳ್ಯದ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು, ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು 3,000 ರೂಪಾಯಿ ದಂಡ ವಿಧಿಸಿದೆ. ಇದರೊಂದಿಗೆ, ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲಾ 5 ದಿನಗಳಂತೆ ಒಟ್ಟು 15 ದಿನಗಳ ಕಾಲ (ದಿನಾಂಕ: 15/03/2026 ರಿಂದ 29/03/2026 ರವರೆಗೆ) ಸುಳ್ಯ ಪೇಟೆಯ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳ ಅರಿವು ಮೂಡಿಸುವ ಫಲಕಗಳನ್ನು ಹಿಡಿದು ನಿಲ್ಲುವ ಮೂಲಕ 'ಸಮುದಾಯ ಸೇವೆ' ನಿರ್ವಹಿಸುವಂತೆ ಆದೇಶಿಸಿದೆ. ಅಲ್ಲದೆ, ಆರೋಪಿತನ ಚಾಲನಾ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ನ್ಯಾಯಾಲಯವು ಸೂಚಿಸಿದೆ.