ಸುಳ್ಯ: ನಗರದ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್‌ನಲ್ಲಿ ಶನಿವಾರ ಸಂಜೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಇಬ್ಬರು ಯುವಕರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಮಾರ್ಚ್ 14ರಂದು ಸಂಜೆ ನಿತೇಶ್ ಆರ್.ಕೆ (33) ಮತ್ತು ಅವರ ಸ್ನೇಹಿತ ಹರೀಶ್ ಎಂಬವರು ಬಾರ್‌ನಲ್ಲಿದ್ದಾಗ, ಅಲ್ಲಿಗೆ ಬಂದ ಇಬ್ಬರು ಯುವಕರು ಕಿರಿಕ್ ತೆಗೆದು ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ಈ ದಾಳಿಯಿಂದಾಗಿ ಹರೀಶ್ ಅವರ ಎಡ ಕುತ್ತಿಗೆಗೆ ಹಾಗೂ ಇಬ್ಬರ ಎಡಗೈಗಳಿಗೆ ಗಾಯಗಳಾಗಿವೆ. ಬಾರ್‌ನಲ್ಲಿದ್ದ ಇತರರು ತಕ್ಷಣ ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆದಿದ್ದು, ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಜ್ಜಾವರ ಗ್ರಾಮದ ರಾಜೇಶ್ ಬಿ.ಆರ್ (27) ಮತ್ತು ದಯಾನಂದ್ (30) ಎಂಬ ಆರೋಪಿಗಳನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 31/2026, ಕಲಂ 118(1), 109 r/w 3(5) BNS 2023 ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.