ಪುತ್ತೂರು: ಸರ್ಕಾರದ ಯೋಜನೆಯಡಿ ಮನೆ ಮಂಜೂರಾತಿಗಾಗಿ ನೀಡಲಾಗುವ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರಿನ ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ನಿವಾಸಿಗಳಾದ ಬಾಬು ಮೇರಾ, ಜ್ಯೋತಿ ಹಾಗೂ ತನಿಯ ಮೇರಾ ಎಂಬುವವರು ಸರ್ಕಾರದ ಯೋಜನೆಯಡಿ ಮನೆ ಮಂಜೂರಾತಿಗಾಗಿ ನೀಡಲಾಗುವ ₹1,50,000 ಹಣವನ್ನು ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದರು. ಈ ಮೂಲಕ ಸರ್ಕಾರದ ಸೌಲಭ್ಯವನ್ನು ವಂಚನೆಯಿಂದ ಪಡೆದುಕೊಂಡ ಆರೋಪ ಇವರ ಮೇಲಿತ್ತು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ಪ್ರಕರಣ (ಅ.ಕ್ರ. ಸಂಖ್ಯೆ: 57/2019) ದಾಖಲಾಗಿದ್ದು, ಐಪಿಸಿ ಕಲಂ 417, 419, 420, 465, 467, 468 ರ ಜೊತೆಗೆ 34ರ ಅಡಿಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು.
ಪುತ್ತೂರು ಗ್ರಾಮಾಂತರ ಠಾಣೆಯ ಅಂದಿನ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಮತ್ತು ಸಕ್ತಿವೇಲು ಅವರು ಈ ಪ್ರಕರಣದ ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಕುಮಾರಿ ಚೇತನಾ ದೇವಿ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಆರೋಪಿಗಳ ಮೇಲಿನ ದೋಷಾರೋಪಣೆ ಸಾಬೀತಾದ ಹಿನ್ನೆಲೆಯಲ್ಲಿ, ಮೂವರು ಆರೋಪಿಗಳಿಗೆ 3 ವರ್ಷಗಳ ಸಜೆ (ಜೈಲು ಶಿಕ್ಷೆ) ಹಾಗೂ ತಲಾ ₹5,000 ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.