ಬಂಟ್ವಾಳ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪ್ರಯಾಣಿಕರ ಬ್ಯಾಗ್‌ನಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ಅಂತರರಾಜ್ಯ ಖದೀಮನನ್ನು ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಧ್ಯಪ್ರದೇಶದ ಧಾರಾ ಜಿಲ್ಲೆಯ ಸಮದ್ ಖಾನ್ (37) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 174 ಗ್ರಾಂ ಚಿನ್ನಾಭರಣ ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.
ಕಳೆದ ವರ್ಷ ನವೆಂಬರ್ 19, 2025 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿತ್ತು. ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್‌ನಲ್ಲಿ ಇರಿಸಿದ್ದ ಸುಮಾರು 170 ರಿಂದ 180 ಗ್ರಾಂ ಚಿನ್ನಾಭರಣಗಳನ್ನು ಆರೋಪಿ ನಾಜೂಕಾಗಿ ಕಳವು ಮಾಡಿ ಪರಾರಿಯಾಗಿದ್ದನು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ. ಕ್ರ :132/2025, ಕಲಂ :303(2) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ, ತಾಂತ್ರಿಕ ಮಾಹಿತಿ ಹಾಗೂ ಖಚಿತ ಬಾತ್ಮಿಯ ಮೇರೆಗೆ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಲ್ಪಟ್ಟಿದ್ದ ಅಷ್ಟೂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.