ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕುಖ್ಯಾತ ರೌಡಿ ಶೀಟರ್ ಸಫಾನ್ ಹುಸೇನ್ ಗ್ಯಾಂಗ್‌ನಿಂದ ನಡೆದಿದ್ದ ಲಕ್ಕಿ ಸಲ್ಮಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬರೋಬ್ಬರಿ 9 ವರ್ಷಗಳ ಬಳಿಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತನನ್ನು ಸೋಫಿಯಾನ @ ಕೋಟೇಶಿ (31 ವರ್ಷ) ಎಂದು ಗುರುತಿಸಲಾಗಿದೆ. ಈತ ಮೂಲತಃ ಬಳ್ಳಾರಿ ಜಿಲ್ಲೆಯ ಸಭಾಪತಿ ಬೀದಿಯ ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ಡಿ.ಜೆ ಹಳ್ಳಿಯ ಶ್ಯಾಮ್ ಪುರದಲ್ಲಿ ಮೊಹಮ್ಮದ್ ಸೋಫಿಯಾನ ಹುಸೇನ್ ಎಂಬ ಹೆಸರಿನಲ್ಲಿ ವಾಸವಾಗಿದ್ದನು.
2017 ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಫಾನ್ ಹುಸೇನ್ ಮತ್ತು ಆತನ ತಂಡ ಲಕ್ಕಿ ಸಲ್ಮಾನ್ ಎಂಬಾತನನ್ನು ಅಪಹರಿಸಿ,ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸೋಫಿಯಾನ ಅಂದಿನಿಂದ ತಲೆಮರೆಸಿಕೊಂಡಿದ್ದನು.
ಪೊಲೀಸರಿಂದ ತಪ್ಪಿಸಿಕೊಳ್ಳಲು ಈತ ಬಳ್ಳಾರಿ, ಮುಂಬೈ ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಅಲೆದಾಡಿದ್ದನು. ಅಂತಿಮವಾಗಿ ಬೆಂಗಳೂರಿನಲ್ಲಿ ತನ್ನ ಹೆಸರನ್ನು ಮೊಹಮ್ಮದ್ ಸೋಫಿಯಾನ ಹುಸೇನ್ ಎಂದು ಬದಲಿಸಿಕೊಂಡು, ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿದ್ದನು. ಅಲ್ಲದೆ, ಅಲ್ಲಿನ ಯುವತಿಯೊಬ್ಬಳನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಈತನ ಮೇಲೆ ,ಲಕ್ಕಿ ಸಲ್ಮಾನ್ ಕೊಲೆ ಪ್ರಕರಣ, ಬಳ್ಳಾರಿಯಲ್ಲಿ ವೃದ್ಧೆಯೊಬ್ಬರ ಕೊಲೆ ಮಾಡಿ ಚಿನ್ನಾಭರಣ ದೋಚಿದ ಪ್ರಕರಣ (2012), ಹೊಸಪೇಟೆ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ, ಬಜಪೆ ಠಾಣೆಯಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ವಸೂಲಿ ಮಾಡಿದ ಪ್ರಕರಣಗಳು ಇದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಘಟಕದ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಬೆಂಗಳೂರಿನಲ್ಲಿ ಈತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹೆಚ್ಚಿನ ಕ್ರಮಕ್ಕಾಗಿ ಆರೋಪಿಯನ್ನು ಸುರತ್ಕಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.