ಪುತ್ತೂರು: ನಗರದ ರಿಲಯನ್ಸ್ ಮಾಲ್ ಬಳಿ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ನಗರ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಎಂಬವರು ಮಾರ್ಚ್ 2ರಂದು ಮಧ್ಯಾಹ್ನ ಪುತ್ತೂರಿನಿಂದ ಕೂರ್ನಡ್ಕಕ್ಕೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪುತ್ತೂರು ರಿಲಯನ್ಸ್ ಮಾಲ್ ಸಮೀಪ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ವ್ಯಕ್ತಿಯೊಬ್ಬ ಹಕೀಂ ಅವರ ಕಾರನ್ನು ಅಡ್ಡಗಟ್ಟಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಬಳಿಯಿದ್ದ ಪಿಸ್ತೂಲ್ ತೋರಿಸಿ ಗುಂಡು ಹೊಡೆಯುವುದಾಗಿ ಬೆದರಿಸಿ ಗಾಬರಿ ಹುಟ್ಟಿಸಿದ್ದಾನೆ.
ಆರೋಪಿಯು ಬೆದರಿಕೆ ಹಾಕುತ್ತಿದ್ದಂತೆಯೇ ಎಚ್ಚೆತ್ತ ಪಿರ್ಯಾದಿದಾರರು ಮತ್ತು ಅಲ್ಲಿದ್ದ ಸಾರ್ವಜನಿಕರು ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಸಮಯಸಾಧಿಸಿದ ಆರೋಪಿ ತನ್ನ ಮೋಟಾರು ಸೈಕಲ್‌ನಲ್ಲಿ ಅಲ್ಲಿಂದ ಪರಾರಿಯಾಗಿದ್ದನು.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಅ ಕ್ರ ನಂಬರ್: 26/2026). ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಪುತ್ತೂರು ನಿವಾಸಿ ಮಹಮ್ಮದ್ ಶಫಿಕ್ (19) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯ ಮೇಲೆ ಈ ಕೆಳಗಿನ ಕಾನೂನುಗಳಡಿ ಮೊಕದ್ದಮೆ ಹೂಡಲಾಗಿದೆ:
BNS 2023: ಕಲಂ 351(3) (ಜೀವ ಬೆದರಿಕೆ)
ಶಸ್ತ್ರಾಸ್ತ್ರ ಕಾಯ್ದೆ 1959: ಕಲಂ 3, 25, 27
ಪ್ರಸ್ತುತ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.