ಸುಳ್ಯ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸರ ವಶದಿಂದ ಪರಾರಿಯಾಗಲು ಯತ್ನಿಸಿದ ಪ್ರಕರಣದ ಆರೋಪಿಗೆ ಸುಳ್ಯದ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ ಕ್ರ 118/24 ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ರಾಘವನ್ @ ಕೋಳಿಕರಣ್ ಎಂಬಾತ ಪೊಲೀಸರ ಕಾನೂನುಬದ್ಧ ವಶದಿಂದ ಪರಾರಿಯಾಗಿದ್ದಲ್ಲದೆ, ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದನು. ಈ ಕುರಿತು ಅಂದಿನ ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಅವರು ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಮಾನ್ಯ ಎಸ್‌ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಶಿಕ್ಷೆ ವಿಧಿಸಿದ್ದಾರೆ:
ಕಲಂ 121(1) ರಡಿ: 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ 6 ತಿಂಗಳ ಶಿಕ್ಷೆ.
ಕಲಂ 132 ರಡಿ (ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ): 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ 3 ತಿಂಗಳ ಶಿಕ್ಷೆ.
ಕಲಂ 262 ರಡಿ (ವಶಕ್ಕೆ ಪಡೆಯುವಾಗ ತಡೆ): 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ 3 ತಿಂಗಳ ಶಿಕ್ಷೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕುಮಾರಿ ಪ್ರೀತಿ ಎಂ.ಸಿ. ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.